ADVERTISEMENT

ಹಂಪಿಯಲ್ಲಿ ಸೌಕರ್ಯ ಕಲ್ಪಿಸಿ, ಗೌರವ ಉಳಿಸಿ

ಅಧಿಕಾರಿಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಖಡಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:38 IST
Last Updated 5 ನವೆಂಬರ್ 2019, 14:38 IST
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಿ.ಟಿ. ರವಿ ಮಾತನಾಡಿದರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಿ.ಟಿ. ರವಿ ಮಾತನಾಡಿದರು   

ಹೊಸಪೇಟೆ:‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಹಂಪಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕುರಿತು ಅನೇಕ ದೂರುಗಳು ಬಂದಿವೆ. ಹಂಪಿಯಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿ, ದೇಶದ ಗೌರವ ಉಳಿಸಿ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ಕೊಟ್ಟರು.

ಮಂಗಳವಾರ ತಾಲ್ಲೂಕಿನ ಕಮಲಾಪುರದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಹಂಪಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಬೇಕು. ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ಪ್ರವಾಸಿ ತಾಣ ಇದಾಗಿದೆ. ವಿರೂಪಾಕ್ಷೇಶ್ವರ ದೇವಸ್ಥಾನ ಎದುರಿನ ಮಳಿಗೆಗಳಿಗೆ ಸಮರ್ಪಕ ವ್ಯವಸ್ಥೆ ಮಾಡಿ’ ಎಂದು ಹೇಳಿದರು.

‘ತಾಲ್ಲೂಕಿನ ಹಂಪಿ ಹಾಗೂ ಇಡೀ ಜಿಲ್ಲೆಗೆ ಸಂಬಂಧಿಸಿದಂತೆ ಸಮಗ್ರವಾದ ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕು.‌‌ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಮತ್ತು ಕ್ರೋಢೀಕೃತ ಯೋಜನೆಯಲ್ಲಿ ಪ್ರವಾಸಿ ತಾಣಗಳ ಸಂಪರ್ಕ, ಶೌಚಾಲಯ, ವಸತಿ ವ್ಯವಸ್ಥೆ, ಕುಡಿಯುವ ನೀರು, ಆತಿಥ್ಯ‌ ಸೇರಿದಂತೆ ಸಮಗ್ರ ವಿವರವುಳ್ಳ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ ಅದನ್ನು ಪರಿಶೀಲಿಸಿ ಅನುಷ್ಠಾನಕ್ಕೆ ತರಲಾಗುವುದು’ ಎಂದು ಹೇಳಿದರು.

ADVERTISEMENT

‘ಯಾತ್ರಿ ನಿವಾಸಗಳ ಸದುಪಯೋಗ, ನಿರ್ವಹಣೆ ಅಗತ್ಯತೆ ಎಷ್ಟು ಎಂಬುದನ್ನು ತಿಳಿದುಕೊಳ್ಳಬೇಕು. ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸಮೀಪದ ವರವಿನಮಲ್ಲೇಶ್ವರ ದೇವಸ್ಥಾನದ ಬಳಿ ಯಾತ್ರಿ‌ ನಿವಾಸ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದ್ದು, 25 ದಿನದೊಳಗೆ‌ ನಿವೇಶನ ನೀಡದಿದ್ದರೆ ಹಣ ಹಿಂಪಡೆಯಲಾಗುವುದು’ ಎಂದರು.

ಶಾಸಕ ಸೋಮಲಿಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ಪಂಚಾಯಿತಿ ಸಿ.ಇ.ಒ. ನಿತೀಶ್‌, ಉಪವಿಭಾಗಾಧಿಕಾರಿ ತನ್ವೀರ್‌ ಶೇಖ್‌ ಆಸೀಫ್‌, ಡಿ.ವೈ.ಎಸ್ಪಿ. ವಿ. ರಘುಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.