
ಹರಪನಹಳ್ಳಿ ( ವಿಜಯನಗರ ಜಿಲ್ಲೆ ): ತಾಲ್ಲೂಕಿನ ಅರಸೀಕೆರೆ ದಂಡಿನ ದುರುಗಮ್ಮ ಜಾತ್ರೆಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರಸೀಕೆರೆ ಗ್ರಾಮದ ಕೆ.ಮಹಮ್ಮದ್ (18), ಉಚ್ಚಂಗಿದುರ್ಗ ಮೊಹಮ್ಮದ್ ಅಖಿಲ್ (18), ಅರಸೀಕೆರೆ ನರೇಂದ್ರ ಪ್ರಸಾದ ಎನ್.ಪಿ. (19), ಕೂಡ್ಲಿಗಿ ಬಿ.ಬಾಬು (36), ಮೊಳಕಾಲ್ಮೂರು ಟಿ.ಕುಮಾರಸ್ವಾಮಿ (43) ಹಾಗೂ ಓರ್ವ ಬಾಲಕ ಸೇರಿ ಒಟ್ಟು ಆರು ಜನ ಬಂಧಿತರು.
ಅವರ ಬಳಿ ಇದ್ದ 5 ಮೊಬೈಲ್ ಫೋನ್, ₹500 ಮುಖಬೆಲೆಯ 80 ಖೋಟಾ ನೋಟು, ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್ ಜಫ್ತಿ ಮಾಡಲಾಗಿದೆ. ಅರಸೀಕೆರೆ ಗ್ರಾಮದಲ್ಲಿ ಜರುಗಿದ ದಂಡಿ ದುರುಗಮ್ಮದೇವಿ ಜಾತ್ರೆಯಲ್ಲಿ ಶ್ರೀಮಾತ ಅಮ್ಯೂಸ್ ಮೆಂಟ್ ಪಾರ್ಕ್ ಮಾಲೀಕ ಎಚ್.ಕೆ.ವೀರಭದ್ರಪ್ಪ ಅವರು ಆಟಿಕೆ ನಡೆಸುವ ಜಾಗದಲ್ಲಿ ಯಾರೊ ಇಬ್ಬರು ವ್ಯಕ್ತಿಗಳು ₹500 ಮುಖಬೆಲೆಯ ಎರಡು ಖೊಟಾ ನೋಟು ಚಲಾವಣೆ ಮಾಡುತ್ತಿದ್ದಾರೆ ಎನ್ನುವ ದೂರು ಆಧರಿಸಿ, ತಂಡಗಳನ್ನು ರಚಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್, ವಿಕಾಸ ಲಮಾಣಿ, ಪಿಎಸ್ಐ ವಿಜಯಕೃಷ್ಣ, ಕಿರಣ್ ಕುಮಾರ, ಸಿಬ್ಬಂದಿ ಆನಂದ, ರವಿದಾದಾಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ದಾದಾಪೀರ, ಹಸನ್ ಸಾಬ್, ಕೆ.ಗುರುರಾಜ, ಹರೀಶ್ ದೇವರಹಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರ್ಯನಾಯ್ಕ, ರವಿನಾಯ್ಕ, ಅಜ್ಜಪ್ಪ, ಸಿಡಿಆರ್ ವಿಭಾಗದ ಇ.ಕರಿಬಸಪ್ಪ, ಕುಮಾರನಾಯ್ಕ, ಜೀಪ್ ಚಾಲಕ ನಾಗರಾಜನಾಯ್ಕ ಪಾಲ್ಗೊಂಡಿದ್ದರು. ತಂಡದ ಕಾರ್ಯಕ್ಕೆ ಎಸ್ಪಿ ಜಾಹ್ನವಿ ಎಸ್, ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.