ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಖ್ಯಮಂತ್ರಿ ಮಾಧ್ಯಮ
ಬಳ್ಳಾರಿ: ‘ಸುಳ್ಳು ಸುದ್ದಿ ಮತ್ತು ಊಹಾ ಪತ್ರಿಕೋದ್ಯಮವು ಇಂದು ಮಾಧ್ಯಮ ಕ್ಷೇತ್ರದ ಎದುರು ಇರುವ ಎರಡು ದೊಡ್ಡ ಸವಾಲುಗಳು’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಪತ್ರಿಕೋದ್ಯಮದಲ್ಲಿ ನೈತಿಕತೆ ಹಾಗೂ ಸತ್ಯ ಇದೆ ಎಂದು ಜನ ನಂಬಿದ್ದಾರೆ. ಸುದ್ದಿ ಬಿತ್ತರಿಸುವ ಮುಂಚೆ ಯೋಚಿಸಬೇಕು. ಸೋಷಿಯಲ್ ಮೀಡಿಯಾಗಳು ಫೇಕ್ ನ್ಯೂಸ್ ಹರಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ’ ಎಂದರು.
‘ಇತರ ದೇಶಗಳಿಗೆ ಹೋಲಿಸಿದರೆ, ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದಲ್ಲಿ ಭಾರತ ಶ್ರೇಯಾಂಕ ಕುಸಿಯುತ್ತಿದೆ. ಸಂವಿಧಾನ ಕೊಟ್ಟ ಅವಕಾಶ ಉಪಯೋಗಿಸಿ ಪತ್ರಿಕಾ ಸ್ವಾತಂತ್ರ ಹಾಗೂ ವಾಕ್ ಸ್ವಾತಂತ್ರ್ಯ ರಕ್ಷಿಸಬೇಕಾಗಿದೆ. ಪತ್ರಿಕೆಗಳು ಜನಮುಖಿಯಾಗಿ ಕೆಲಸ ಮಾಡಿ ಸರ್ಕಾರದ ಗಮನ ಸೆಳೆಯುವಂತಿರಬೇಕು. ಇಂದಿನ ಸುದ್ದಿಗಳಲ್ಲಿ ಗಂಭೀರತೆ ಇಲ್ಲ. ಜತೆಗೆ ಮೌಢ್ಯ ಬಿತ್ತುವ ಕೆಲಸಗಳಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಫ್ಯಾಶನ್‌ಗಾಗಿ ಪತ್ರಿಕೋದ್ಯಮಕ್ಕೆ ಬರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಪತ್ರಕರ್ತರು ಹಳ್ಳಿ ಹಳ್ಳಿಗೆ ತಿರುಗಿ ನೈಜ ಮತ್ತು ಸಮಾಜಮುಖಿ ಕೆಲಸ ಮಾಡುತ್ತಾರೆ. ಮಾಧ್ಯಮ ಸಂಜೀವಿನಿ ಯೋಜನೆಯನ್ನು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದವರೆಗೆ ವಿಸ್ತರಿಸಲಾಗುವುದು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲಾಗುತ್ತಿದೆ’ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಬೇಕೆಂಬ 30 ವರ್ಷಗಳ ಬೇಡಿಕೆ ಸಾಕಾರವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರ ಪಾತ್ರ ಹಿರಿದು’ ಎಂದರು.
‘ವಿಸಿಟಿಂಗ್ ಕಾರ್ಡ್ ಪತ್ರಕರ್ತರು, ನಕಲಿ ಪತ್ರಕರ್ತರು, ಬ್ಲಾಕ್ ಮೇಲ್ ಪತ್ರಕರ್ತರ ನಡುವೆ ನೈಜ ಪತ್ರಕರ್ತರನ್ನು ಉಳಿಸಿಕೊಳ್ಳುವುದು ಈಗಿನ ಸವಾಲಾಗಿದೆ. ಗಾಂಧಿ, ಅಂಬೇಡ್ಕರ್ ಸಹ ಪತ್ರಕರ್ತರಾಗಿದ್ದರು. ಸಮಾಜಕ್ಕೆ ರೋಗ ಬಂದಲ್ಲಿ ಅದಕ್ಕೆ ಮದ್ದು ನೀಡುವುದು ಪತ್ರಿಕೋದ್ಯಮ. ನ್ಯಾಯಮೂರ್ತಿಗಳೇ ನ್ಯಾಯ ಕೇಳಿಕೊಂಡು ಮಾಧ್ಯಮಗಳ ಬಳಿಗೆ ಬಂದ ಉದಾಹರಣೆ ಈ ದೇಶದಲ್ಲಿದೆ’ ಎಂದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾಧ್ಯಮ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮಾತನಾಡಿ, ‘ಮಾಧ್ಯಮ ಪ್ರತಿನಿಧಿಗಳಿಗೆ ನಿವೇಶನ ಒದಗಿಸಲು ವಸತಿ ಸಚಿವರೊಂದಿಗೆ ಸೇರಿ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ, ಬಳ್ಳಾರಿ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ .ವಿ.ಜೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕ ಬಿ. ವಿ. ತುಕಾರಾಮ್ ರಾವ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಕಾರ್ಯಕಾರಿ ಸಮಿತಿ ಸದಸ್ಯ ಎನ್. ವೀರಭದ್ರಗೌಡ, ಆಡಾಕ್ ಸಮಿತಿ ಸದಸ್ಯ ಕೆ. ಮಲ್ಲಯ್ಯ ಮೋಕ, ವೆಂಕೋಬಿ ಸಂಗನಕಲ್ಲು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.