ADVERTISEMENT

ಹೊಸ ಪ್ರಯೋಗದಿಂದ ಯಶಸ್ಸು ಕಂಡರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:01 IST
Last Updated 29 ಜುಲೈ 2021, 13:01 IST
ಎಕ್ಕೆಗುಂದಿ ಗ್ರಾಮದ ತಮ್ಮ ಹೊಲದಲ್ಲಿ ರೈತ ಎಂ.ಆರ್. ಗುರುಸ್ವಾಮಿ
ಎಕ್ಕೆಗುಂದಿ ಗ್ರಾಮದ ತಮ್ಮ ಹೊಲದಲ್ಲಿ ರೈತ ಎಂ.ಆರ್. ಗುರುಸ್ವಾಮಿ   

ಕೂಡ್ಲಿಗಿ: ತಾಲ್ಲೂಕಿನ ಎಕ್ಕೆಗುಂದಿ ಗ್ರಾಮದ ರೈತ ಎಂ.ಆರ್. ಗುರುಸ್ವಾಮಿ ಅವರು ಕಡಿಮೆ ನೀರಿನಲ್ಲಿ ಅಲ್ಪಾವಧಿ ಬೆಳೆ ಬೆಳೆದು ಅದರಲ್ಲೇ ಲಾಭ ಗಳಿಸುತ್ತಿದ್ದಾರೆ.

ಆರು ಎಕರೆ ಖುಷ್ಕಿ ಜಮೀನು ಹೊಂದಿರುವ ಗುರುಸ್ವಾಮಿ, ಸಜ್ಜೆ, ನವಣೆ ಬೆಳೆದು ಲಾಭದಲ್ಲಿ ಮುನ್ನಡೆದಿದ್ದಾರೆ. ಈ ವರ್ಷ ಎಳ್ಳು ಬಿತ್ತನೆ ಮಾಡಿದ್ದಾರೆ.

ಈ ಹಿಂದೆ ಎಳ್ಳು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ಅದನ್ನು ಕೈಬಿಟ್ಟು ಮೆಕ್ಕೆಜೋಳ, ಶೇಂಗಾದತ್ತ ಮುಖ ಮಾಡಿದ್ದಾರೆ. ಆದರೆ, ಗುರುಸ್ವಾಮಿ ಅದರಿಂದ ವಿಚಲಿತರಾಗದೆ ಪ್ರಯೋಗಕ್ಕೆ ಮುಂದಾಗಿ ಯಶಸ್ಸು ಕಂಡಿದ್ದಾರೆ. ಇತರೆ ರೈತರು ಇವರ ಯಶಸ್ಸು ನೋಡಿ ಅವರು ಮನಸ್ಸು ಬದಲಿಸುವ ಹಂತಕ್ಕೆ ಬಂದಿದ್ದಾರೆ.

ADVERTISEMENT

2019-20ನೇ ಮುಂಗಾರಿನಲ್ಲಿ ನವಣೆ ಬಿತ್ತಿದ್ದ ಅವರು 35 ಕ್ವಿಂಟಲ್ ಹಾಗೂ 20-21ನೇ ಸಾಲಿನಲ್ಲಿ ಸಜ್ಜೆ ಬಿತ್ತನೆ ಮಾಡಿ 36 ಕ್ವಿಂಟಲ್ ಇಳುವರಿ ಪಡೆದಿದ್ದರು. ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದ ನವಣೆಯಿಂದ ಹೆಚ್ಚು ಲಾಭ ಪಡೆದಿದ್ದಾರೆ. ಸಜ್ಜೆಯಿಂದಲೂ ನೀರಿಕ್ಷಿತ ಲಾಭ ಗಳಿಸಿ ಬೇರೆಯರಿಗೆ ಮಾದರಿಯಾಗಿದ್ದಾರೆ.

‘ನಮ್ಮ ಭಾಗದಲ್ಲಿ ಮಳೆ ಕಡಿಮೆ. ಇದರಿಂದ ಹೆಚ್ಚು ನೀರು ಬೇಕಾಗದ ಬೆಳೆ ಬೆಳೆಯಲು ಚಿಂತನೆ ಮಾಡಿ, ಸಜ್ಜೆ, ನವಣೆ ಬಿತ್ತನೆ ಮಾಡಿ, ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಪಡೆದಿದ್ದೇನೆ’ ಎನ್ನುತ್ತಾರೆ ಎಂ.ಆರ್. ಗುರುಸ್ವಾಮಿ.

‘ಹೆಚ್ಚು ಮಳೆ, ಸತತ ಮೋಡದಿಂದ ಬೆಳೆಯಲ್ಲಿ ಹುಳು ಕಾಣಿಸಿಕೊಂಡರೆ ತಕ್ಷಣವೇ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯುತ್ತಾನೆ. ಅವರ ಸಲಹೆ ಮೇರೆಗೆ ಅಗತ್ಯಬಿದ್ದಲ್ಲಿ ಔಷಧ ಸಿಂಪಡಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.