ADVERTISEMENT

ಏತ ನೀರಾವರಿಗೆ ಬೀದಿಗಿಳಿದ ರೈತರು

ಹೊಸಪೇಟೆ ತಾಲ್ಲೂಕಿನ ಹನ್ನೊಂದು ಗ್ರಾಮಗಳ ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:11 IST
Last Updated 2 ನವೆಂಬರ್ 2019, 14:11 IST
ಧರಣಿ ನಿರತ ರೈತರನ್ನು ಉದ್ದೇಶಿಸಿ ರೈತ ಮುಖಂಡ ಮೊಹಮ್ಮದ್‌ ನಿಯಾಜಿ ಮಾತನಾಡಿದರು
ಧರಣಿ ನಿರತ ರೈತರನ್ನು ಉದ್ದೇಶಿಸಿ ರೈತ ಮುಖಂಡ ಮೊಹಮ್ಮದ್‌ ನಿಯಾಜಿ ಮಾತನಾಡಿದರು   

ಹೊಸಪೇಟೆ: ಏತ ನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿ ತಾಲ್ಲೂಕಿನ ಹನ್ನೊಂದು ಗ್ರಾಮಗಳ ರೈತರು ಶನಿವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು.

ಬೆಳಿಗ್ಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ರೈತರು, ಅಲ್ಲಿಂದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ, ಕಚೇರಿ ಎದುರು ದಿನವಿಡೀ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಜಿಲ್ಲಾ ಅಧ್ಯಕ್ಷ ಬಿ. ಗೋಣಿಬಸಪ್ಪ ಮಾತನಾಡಿ, ‘ಯಾವುದೇ ನೀರಾವರಿ ಸೌಲಭ್ಯಗಳಿಲ್ಲದ ಕಾರಣತಾಲ್ಲೂಕಿನ ಇಂಗಳಗಿ, ವಡ್ಡರಹಳ್ಳಿ, ಪಿ.ಕೆ. ಹಳ್ಳಿ, ಬೈಲುವದ್ದಿಗೇರಿ, ಗುಂಡ್ಲವದ್ದಿಗೇರಿ, ಕಾಕುಬಾಳು, ಧರ್ಮಸಾಗರ, ಜಿ.ಜಿ. ಕ್ಯಾಂಪ್‌, ಕೊಟಗಿನಹಾಳು, ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಏತ ನೀರಾವರಿ ಯೋಜನೆ ಜಾರಿಗೆ ತರಬೇಕು ಎನ್ನುವುದ ಬಹುವರ್ಷಗಳ ಬೇಡಿಕೆಯಾಗಿದೆ. ಆದರೆ, ಯಾವೊಬ್ಬ ಜನಪ್ರತಿನಿಧಿಯೂ ಸ್ಪಂದಿಸುತ್ತಿಲ್ಲ’ ಎಂದರು.

ADVERTISEMENT

‘ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಯೋಜನೆ ತಯಾರಿಸಿ, ಅದಕ್ಕೆ ಸರ್ಕಾರದಿಂದ ಅನುಮೋದನೆ ಕೊಡಿಸುವ ಕೆಲಸ ಯಾರು ಮಾಡುತ್ತಾರೋ ಅಂತಹವರಿಗೆ ಬರುವ ಉಪಚುನಾವಣೆಯಲ್ಲಿ ಬೆಂಬಲಿಸಲಾಗುವುದು. ಈ ಹಿಂದಿನಂತೆ ಭರವಸೆ ಕೊಟ್ಟರೆ ಕೆಲಸ ಆಗುವುದಿಲ್ಲ. ಬರುವ ದಿನಗಳಲ್ಲಿ ಚುನಾವಣೆ ಬಹಿಷ್ಕಾರಕ್ಕೂ ಚಿಂತನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ತೆಲಂಗಾಣ ಸರ್ಕಾರ ₹ 80 ಸಾವಿರ ಕೋಟಿ ವೆಚ್ಚದಲ್ಲಿ ಕಾಳೇಶ್ವರಂ ನೀರಾವರಿ ಯೋಜನೆ ಜಾರಿಗೆ ತರುತ್ತಿದೆ. ಇದರಿಂದ 47 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರು ಹರಿಸಬಹುದು. ಇದರಿಂದ ಬರಡು ಭೂಮಿ ಹಸಿರಾಗಲಿದೆ. ರಾಜ್ಯದ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿ ನೀಡಿ ರಾಜ್ಯದಲ್ಲೂ ಅಂಥ ಯೋಜನೆಯನ್ನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಬೇಕು’ ಎಂದರು.

‘ತಾಲ್ಲೂಕಿನ ಏಕೈಕ ಸಕ್ಕರೆ ಕಾರ್ಖಾನೆ ಮುಚ್ಚಿ ನಾಲ್ಕು ವರ್ಷಗಳಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಅನ್ಯ ಜಿಲ್ಲೆಗಳ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ತಾಂತ್ರಿಕ ಕಾರಣಗಳನ್ನು ಬಗೆಹರಿಸಿ ಸರ್ಕಾರ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಆರಂಭಿಸಿ ರೈತರ ಹಿತ ಕಾಯಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ಜಿಲ್ಲಾ ಉಪಾಧ್ಯಕ್ಷ ಎ. ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಗಂಟೆ ಸೋಮಶೇಖರ್‌, ಮುಖಂಡ ಎನ್‌. ಅಂಕ್ಲೇಶ್‌, ಎಂ.ಜಡೆಪ್ಪ, ಮೊಹಮ್ಮದ್‌ ನಿಯಾಜಿ, ಬಿ. ಸಿದ್ದನಗೌಡ, ಗಂಗಾ ಧಾರವಾಡಕರ್‌, ಎಂ. ದಾನೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.