ADVERTISEMENT

ಕೃಷಿ, ನೀರಾವರಿಗೆ ಅನುದಾನ ನೀಡದ ಸರ್ಕಾರ: ಶಾಸಕ ಎಲ್.ಕೃಷ್ಣನಾಯ್ಕ

ರೈತರ ದಿನಾಚರಣೆಯಲ್ಲಿ ಅಸಹಾಯಕತೆ ತೋಡಿಕೊಂಡ ಶಾಸಕ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:32 IST
Last Updated 24 ಡಿಸೆಂಬರ್ 2025, 2:32 IST
ಹೂವಿನಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಸಾಧಕ ರೈತರಿಗೆ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಲಾಯಿತು
ಹೂವಿನಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಸಾಧಕ ರೈತರಿಗೆ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಲಾಯಿತು   

ಹೂವಿನಹಡಗಲಿ: ‘ಕೃಷಿ, ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡದೇ ರೈತ ವಿರೋಧಿ ನೀತಿ ತಾಳಿದೆ’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಟೀಕಿಸಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಸದ್ಬಳಕೆ ಮಾಡಿಕೊಳಲು ಆಗುತ್ತಿಲ್ಲ. ಸಿಂಗಟಾಲೂರು ಯೋಜನೆ ಅಚ್ಚುಕಟ್ಟಿಗೆ ತಾಲ್ಲೂಕಿನ 32 ಸಾವಿರ ಎಕರೆ ಒಳಪಟ್ಟಿದ್ದರೆ, 20 ಸಾವಿರ ಎಕರೆಗೆ ಮಾತ್ರ ನೀರು ಹರಿಯುತ್ತಿದೆ. ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಗಳ ನಿರ್ವಹಣೆಯನ್ನು ಸರ್ಕಾರ ನಿರ್ಲಕ್ಷಿಸಿರುವುದರಿಂದ ರೈತರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ’ ಎಂದರು.

ADVERTISEMENT

‘ತಳಕಲ್ಲು ಕೆರೆಗೆ ನೀರು ತುಂಬಿಸುವ ₹27 ಕೋಟಿ ಮೊತ್ತದ ಪ್ರತ್ಯೇಕ ಯೋಜನೆಯ ಡಿಪಿಆರ್ ಕಸದ ಬುಟ್ಟಿ ಸೇರಿದೆ. ಕೃಷಿ ಇಲಾಖೆಯ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಕ್ಷೇತ್ರದ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದರೂ ಪ್ರಯೋಜನ ಇಲ್ಲ, ಸದನದಲ್ಲಿ ಗಮನ ಸೆಳೆದರೂ ಸರ್ಕಾರದಿಂದ ಸ್ಪಂದನೆ ಇಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

‘ಎರಡೂವರೆ ವರ್ಷ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ಇನ್ಮೂಂದೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ರೈತರು, ರೈತ ಸಂಘಟನೆಗಳು ಬೆಂಬಲಕ್ಕೆ ನಿಲ್ಲಬೇಕು. ವಿದ್ಯುತ್ ಪರಿವರ್ತಕಗಳನ್ನು ಜೆಸ್ಕಾಂನವರು ಉಚಿತವಾಗಿ ದುರಸ್ತಿ ಮಾಡಿಸಬೇಕು. ರೈತರು ಟಿಸಿಗಳಿಗೆ ಹಣ ನೀಡದೇ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬೇಕು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಮಂಜುನಾಥ ಭಾನುವಳ್ಳಿ, ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ, ಪಶು ವೈದ್ಯಾಧಿಕಾರಿ ಡಾ. ನಾರಾಯಣ ಬಣಕಾರ, ತೋಟಗಾರಿಕೆ ಅಧಿಕಾರಿ ಚಂದ್ರಕುಮಾರ, ಗೃಹ ವಿಜ್ಞಾನಿ ಸುನೀತಾ, ಕೃಷಿಕ ಸಮಾಜದ ಅಧ್ಯಕ್ಷ ದೀಪದ ಕೃಷ್ಣಪ್ಪ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಎಂ.ಸತ್ಯನಾರಾಯಣ, ಎನ್.ಎಂ.ಸಿದ್ದೇಶ, ಎಚ್.ಸಿದ್ದಪ್ಪ, ವಿ.ಬಿ.ಕೊಟ್ರೇಶ, ಬಸವರಾಜ, ಕುಂಚೂರು ಸತೀಶ, ನಾಗರಾಜ, ಚಂದ್ರಶೇಖರ ಪೂಜಾರ್, ಹೊಟ್ಟಿಗೌಡ್ರ ಮಂಜುನಾಥ, ಎಸ್.ತಿಮ್ಮಣ್ಣ ಉಪಸ್ಥಿತರಿದ್ದರು.

ಸಾಧಕ ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲಾಯಿತು. ದೇಸಿ ಬೀಜಗಳ ಪ್ರದರ್ಶನ, ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಏರ್ಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.