ADVERTISEMENT

ಗಣಿ ಪರಿಸರ ಪುನಶ್ಚೇತನಕ್ಕೆ ಹೋರಾಟ: ಎಸ್‌.ಆರ್‌. ಹಿರೇಮಠ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:15 IST
Last Updated 17 ಆಗಸ್ಟ್ 2025, 6:15 IST
ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಮಾತನಾಡಿದರು
ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಮಾತನಾಡಿದರು   

ಬಳ್ಳಾರಿ: ‘ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದಂತೆಯೇ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಕೆಎಂಇಆರ್‌ಸಿ ಹಣದ ಸದ್ಬಳಕೆಗೆ ಜನ ಹೋರಾಟ ಮಾಡಬೇಕಾಗಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಅಭಿಪ್ರಾಯಪಟ್ಟರು.  

ರೈತ, ಕಾರ್ಮಿಕ, ಸಾಮಾಜಿಕ ಹೋರಾಟಗಾರರು ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ‘ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅಕ್ರಮ ಗಣಿಗಾರಿಕೆಯಿಂದ ಜನ ಮತ್ತು ಪರಿಸರಕ್ಕೆ ಆಗಿರುವ ಹಾನಿಯ ಪುನಶ್ಚೇತನಕ್ಕೆ ಸುಪ್ರೀಂ ಕೋರ್ಟ್‌ ಕೆಎಂಇಆರ್‌ಸಿ (ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ) ಸ್ಥಾಪನೆ ಮಾಡಿತು. ಅದರಲ್ಲಿ ₹30 ಸಾವಿರ ಕೋಟಿಯಷ್ಟು ಹಣ ಸಂಗ್ರಹವಾಗಿದೆ. ಆದರೆ, ಅದರ ಸದ್ಭಳಕೆ ಆಗುತ್ತಿಲ್ಲ.‌ ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಹೋರಾಟದಂತೆಯೇ, ಕೆಎಂಇಆರ್‌ಸಿ ಹಣದ ಸದ್ಬಳಕೆಗೆ ಮತ್ತೆ ಹೋರಾಟ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದ ಖನಿಜ ಸಂಪತ್ತು ಕರಗಿ ಹೋಗುತ್ತಿದೆ. ಮುಂದಿನ ಪೀಳಿಗೆ ಗಮನದಲ್ಲಿಟ್ಟುಕೊಂಡು ಅದನ್ನು ಯೋಜನಾ ತೆಗೆಯಬೇಕು. ಈಗಿರುವ 50 ದಶಲಕ್ಷ ಟನ್‌ನ ಮಿತಿಯನ್ನು 57 ದಶಲಕ್ಷ ಟನ್‌ಗೆ ಏರಿಸುವ ಹುನ್ನಾರ ನಡೆಯುತ್ತಿದೆ. ಅದು 20 ದಶಲಕ್ಷ ಟನ್‌ಗೆ ಮಿತಿಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಸಾಹಿತಿ ಅಲ್ಲಮಪ್ರಭು ಬೆಟದೂರು ಮಾತನಾಡಿ, ‘ಗಣಿ ಬಾಧಿತ ಪ್ರದೇಶಗಳಲ್ಲಿ ಅರಣ್ಯ ಬೆಳೆಸಲು ಯೋಜನೆ ರೂಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಣು ವಿದ್ಯುತ್ ಯೋಜನೆ ಕೈಗೊಳ್ಳಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಅದರ ಬದಲಿಗೆ ಸೌರ ವಿದ್ಯುತ್ ಯೋಜನೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು. 

ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ರವಿಕೃಷ್ಟ ರೆಡ್ಡಿ ಮಾತನಾಡಿ, ‘ಗಣಿ ಬಾಧಿತ ತಾಲ್ಲೂಕುಗಳನ್ನು ಇಡೀ ದೇಶದಲ್ಲೇ ಮಾದರಿಯಾಗಿಸುವಷ್ಟು ಹಣ ಕೆಎಂಇಆರ್‌ಸಿಯಲ್ಲಿದೆ. ಆದರೆ, ರಾಜಕಾರಣಿಗಳ ಧನದಾಹದಿಂದ ಎಲ್ಲವೂ ವ್ಯರ್ಥವಾಗುತ್ತಿದೆ. ಅರಣ್ಯ ಪುನಶ್ಚೇತನಕ್ಕೆ, ಜನರ ಬದುಕು ಹಸನಾಗುವ ಯೋಜನೆಗಳಿಗೆ ಆದ್ಯತೆ ನೀಡಿದೇ ನಿರ್ಮಾಣ ಆಧಾರಿತ ಯೋಜನೆಗಳಿಗೆ ಆದ್ಯತೆ ಕೊಡಲಾಗುತ್ತಿದೆ. ಇನ್ನು ಮುಂದೆ ಜನರೇ ಮುಂದೆ ಬಂದು ತಮ್ಮ ಹಕ್ಕು ಪಡೆದುಕೊಳ್ಳಬೇಕು. ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕೊಡಬೇಕು’ ಎಂದು ಸಲಹೆ ನೀಡಿದರು.

ಎಸ್‌ಯುಸಿಐ ನಾಯಕಿ ನಾಗಲಕ್ಷ್ಮಿ ಮಾತನಾಡಿ, ‘ಗಣಿ ಬಾಧಿತ ಪ್ರದೇಶಗಳ ಜನರ ಬದುಕು ದೀಪದ ಕೆಳಗೇ ಕತ್ತಲು ಎಂಬಂತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಡೂರು ತಾಲ್ಲೂಕಿನ ಜನ ಶ್ರೀಮಂತರೆಂಬ ಎಂಬ ಭಾವನೆ ಹೊರ ಜಗತ್ತಿನಲ್ಲಿದೆ. ಆದರೆ ಕಡುಬಡತನ ತಾಂಡವವಾಡುತ್ತಿರುವುದು ಇದೇ ತಾಲೂಕಿನಲ್ಲೇ
ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ

ಇದಕ್ಕೂ ಮೊದಲು ನಗರದ ಗಡಿಗಿ ಚೆನ್ನಪ್ಪ (ರಾಯಲ್‌)ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿದ ಹೋರಾಟಗಾರರು, ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿ ಸಂಚಾಲಕ ದೀಪಕ್, ಜಮಾತ್‌ ಎ ಇಸ್ಲಾಮ್‌ ಹಿಂದ್‌ ಸಂಘಟನೆಯ ಸಯ್ಯದ್ ನಾಸಿರ್ ಅಲಿ  ಮಾತನಾಡಿದರು.

ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲದಹಳ್ಳಿ, ಚಾಮರಸ ಮಾಲಿಪಾಟೀಲ್‌, ಟಿ.ಎಂ ಶಿವಕುಮಾರ್‌, ಎಂ.ಎಲ್‌.ಕೆ ನಾಯ್ಡು, ಗೋವಿಂದರಾಜ್ ಇದ್ದರು. 

ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಗಣಿ ಬಾಧಿತ ಹಳ್ಳಿಗಳ ಜನ ಸಮಾವೇಶದಲ್ಲಿ ಭಾಗವಹಿಸಿದ್ದರು.

'ದೇವನಹಳ್ಳಿಯಂಥ ಹೋರಾಟ ಅಗತ್ಯ’

‘ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ₹30 ಸಾವಿರ ಕೋಟಿ ಇದೆ. ಈ ಹಣದಲ್ಲಿ ಜಾರಿಗೊಳಿಸುವ ಯೋಜನೆಗಳಿಗೆ ಜನರ ಸಹಭಾಗಿತ್ವ ಇರಬೇಕು. ಸಂಡೂರಿನ‌ ಹಳ್ಳಿಗಳು ನರಕದಂತಿವೆ‌. ದೇವನಹಳ್ಳಿ ಹೋರಾಟದಂತೆ ಖನಿಜ‌ ಸಂಪತ್ತು ಉಳಿಸಿಕೊಳ್ಳುವ ಹೋರಾಟಗಳು ನಡೆಯಬೇಕು’ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿಯು ಬಳ್ಳಾರಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶಕ್ಕೂ ಮುನ್ನ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.