ಹೂವಿನಹಡಗಲಿ : ತಾಲ್ಲೂಕಿನಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಅಪಾರ ಭಕ್ತರು ಪೂಜೆ ಸಲ್ಲಿಸಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದರು.
ಕೋಟೆಯಲ್ಲಿರುವ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ, ಪಾತಾಳ ಲಿಂಗೇಶ್ವರ, ಗೋಣಿಬಸವೇಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.
ತಾಲ್ಲೂಕಿನ ಸುಕ್ಷೇತ್ರ ಕುರುವತ್ತಿ ಬಸವೇಶ್ವರ, ಸೋಗಿ ಬೆಟ್ಟದ ಮಲ್ಲೇಶ್ವರ, ಕೊಟ್ನಿಕಲ್ ಶಂಕರಲಿಂಗೇಶ್ವರ ದೇವಸ್ಥಾನಗಳಲ್ಲಿ ಜನರು ಶ್ರದ್ದಾಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಶಿವಲಿಂಗು ಇರುವ ದೇವಸ್ಥಾನಗಳಿಗೆ ಸಂಜೆ ಅಪಾರ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ಹೊಳಲು ಗ್ರಾಮದ ಐತಿಹಾಸಿಕ ಅಮೃತೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಚನ್ನಬಸವ ದೇವರ ಸಾನ್ನಿಧ್ಯದಲ್ಲಿ ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಅಪಾರ ಭಕ್ತರು ಅಮೃತೇಶ್ವರನಿಗೆ ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ಅಧ್ಯಾತ್ಮ ಪ್ರವಚನ ಕಾರ್ಯಕ್ರಮ ಜರುಗಿತು. ನಿವೃತ್ತ ಶಿಕ್ಷಕ ಎಚ್.ಎಂ.ವಾಮದೇವಯ್ಯ ಹಾಗೂ ಅಮೃತೇಶ್ವರ ಸೇವಾ ಸಮಿತಿಯವರು ಇದ್ದರು.
ಗವಿಮಠದಲ್ಲಿ ಇಷ್ಟಲಿಂಗ ಪೂಜೆ : ಪಟ್ಟಣದ ಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಅಷ್ಟೋತ್ತರ ಶತ ನಾಮಾವಳಿ, ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು. ಸೋಗಿ ಎ.ಎಂ. ಹಾಲಯ್ಯ ಶಾಸ್ತ್ರಿ ಪೌರೋಹಿತ್ಯ ವಹಿಸಿದ್ದರು. ಮಠದ ಭಕ್ತರು ಶ್ರದ್ದಾಭಕ್ತಿಯಿಂದ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.