ADVERTISEMENT

ವಿಷಾಹಾರ ಸೇವನೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 40 ವಿದ್ಯಾರ್ಥಿಗಳು ಅಸ್ವಸ್ಥ

ಕಳಪೆ ಆಹಾರ ಪೂರೈಕೆ ಆರೋಪ, ವಿ.ವಿ. ವಿರುದ್ಧ ಆಕ್ರೋಷ

​ಪ್ರಜಾವಾಣಿ ವಾರ್ತೆ
Published 7 ಮೇ 2019, 9:22 IST
Last Updated 7 ಮೇ 2019, 9:22 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಷಾಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡು ಇನ್ನಷ್ಟು ವಿದ್ಯಾರ್ಥಿನಿಯರು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿ.ವಿ. ಪರಿಸರದಲ್ಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ‘ಅಸ್ಮಿತೆ’ಯಲ್ಲಿ ಸೋಮವಾರ ಮಧ್ಯಾಹ್ನ ವಿದ್ಯಾರ್ಥಿನಿಯರು ಊಟ ಮಾಡಿದ್ದರು. ಸಂಜೆಯಾಗುತ್ತಿದ್ದಂತೆ ವಿದ್ಯಾರ್ಥಿನಿಯರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ರಾತ್ರಿ 10.30ರ ವರೆಗೆ 20 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ಮತ್ತಷ್ಟು ವಿದ್ಯಾರ್ಥಿನಿಯರು ಅಸ್ವಸ್ಥರಾದರು. ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ವಿಷಯ ತಿಳಿದು ಕುಲಪತಿ ಪ್ರೊ. ಸ.ಚಿ. ರಮೇಶ ಅವರು ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ವಿದ್ಯಾರ್ಥಿನಿಯರ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದರು.

ADVERTISEMENT

‘ಎಲ್ಲ ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರ ಅಸ್ವಸ್ಥಗೊಂಡವರಿಗೆ ಗ್ಲುಕೋಸ್‌ ಹಚ್ಚಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿಯರು ವಾಂತಿ, ಭೇದಿ ಮಾಡಿಕೊಂಡಿದ್ದಾರೆ’ ಎಂದು ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯಾಹ್ನದ ಊಟದ ಜತೆಗೆ ಮಜ್ಜಿಗೆ ಕುಡಿದವರಿಗೆ ಮಾತ್ರ ವಾಂತಿ, ಭೇದಿಯಾಗಿದೆ. ಉಳಿದವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ರೆಫ್ರಿಜಿರೇಟರ್‌ನಲ್ಲಿ ಇಟ್ಟಿದ್ದ ಮಜ್ಜಿಗೆ ಹಾಳಾಗಿತ್ತು ಎಂದು ಗೊತ್ತಾಗಿದೆ. ಇದು ವಿದ್ಯಾರ್ಥಿ ನಿಲಯದ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಆಗಿದೆ. ಕಳಪೆ ಗುಣಮಟ್ಟದ ಆಹಾರ ಪೂರೈಸುತ್ತಿದ್ದಾರೆ. ಈ ಕುರಿತು ಹಲವು ಸಲ ವಿ.ವಿ. ಕುಲಪತಿ, ಕುಲಸಚಿವರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

ಕಳಪೆ ಆಹಾರ ಪೂರೈಕೆ, ಆರೋಪ

‘ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ 40 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕನಿಷ್ಠ ಮೂಲಸೌಕರ್ಯ ಒದಗಿಸಲು ವಿ.ವಿ. ವಿಫಲವಾಗಿದೆ’ ಎಂದು ಎ.ಐ.ಡಿ.ಎಸ್‍.ಓ.ನ ಕಾರ್ಯದರ್ಶಿ ಜಿ. ಸುರೇಶ್‌, ಎ.ಐ.ಡಿ.ವೈ.ಓ.ನ ಕಾರ್ಯದರ್ಶಿ ಎಚ್‌. ಯರ್ರಿಸ್ವಾಮಿ ದೂರಿದ್ದಾರೆ.

‘ವಸತಿ ನಿಲಯದಲ್ಲಿ ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಆಹಾರ ತಯಾರಿಕೆಗೆ ಶುದ್ಧ ನೀರು ಬಳಸುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಲಾಗುತ್ತಿದೆ. ಕೋಣೆ ಸ್ವಚ್ಛತೆಯಿಂದ ಕೂಡಿಲ್ಲ. ಕಳಪೆ ಆಹಾರ ಕೊಡುತ್ತಿರುವುದರಿಂದ ಅನೇಕ ವಿದ್ಯಾರ್ಥಿಗಳು ಹೊರಗೆ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿದ್ದಾರೆ. ಸರಿಯಾಗಿ ಆಹಾರ ಕೊಡಲು ಆಗದ ವಿ.ವಿ.ಗೆ ಒಳ್ಳೆಯ ಶಿಕ್ಷಣ ಕೊಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಂದು ಸಮಿತಿ ರಚಿಸಿ, ಹಾಸ್ಟೆಲ್‌ಗಳಲ್ಲಿನ ವ್ಯವಸ್ಥೆ ಕುರಿತು ಪರಿಶೀಲಿಸಬೇಕು. ಅಗತ್ಯ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.