ADVERTISEMENT

ಪಾದಚಾರಿ ಮಾರ್ಗ ಜನರ ಓಡಾಟಕ್ಕಲ್ಲ, ವ್ಯಾಪಾರಕ್ಕೆ!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಜುಲೈ 2019, 19:30 IST
Last Updated 14 ಜುಲೈ 2019, 19:30 IST
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಪಾದಚಾರಿ ಮಾರ್ಗದ ಮೇಲೆ ಹಣ್ಣು, ಬಟ್ಟೆ ಮಾರಾಟ ಮಾಡುತ್ತಿರುವುದು
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಪಾದಚಾರಿ ಮಾರ್ಗದ ಮೇಲೆ ಹಣ್ಣು, ಬಟ್ಟೆ ಮಾರಾಟ ಮಾಡುತ್ತಿರುವುದು   

ಹೊಸಪೇಟೆ: ನಗರದಲ್ಲಿನ ಬಹುತೇಕ ಪಾದಚಾರಿ ಮಾರ್ಗಗಳು ವ್ಯಾಪಾರ ವಹಿವಾಟಿಗೆ ಸೀಮಿತವಾಗಿದ್ದು, ದಾರಿ ಹೋಕರಿಗೆ ರಸ್ತೆಯೇ ಗತಿ ಎಂಬಂತಾಗಿದೆ.

ನಗರದ ಕಾಲೇಜು ರಸ್ತೆ, ಮೇನ್‌ ಬಜಾರ್‌ ರಸ್ತೆ, ಬಸ್‌ ನಿಲ್ದಾಣ ಎದುರಿನ ರಸ್ತೆ, ಟಿ.ಬಿ. ಡ್ಯಾಂ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ, ಅವುಗಳಿಂದ ಪಾದಚಾರಿಗಳಿಗೆ ಯಾವುದೇ ಉಪಯೋಗ ಇಲ್ಲದಂತಾಗಿದೆ.

ಹೆಚ್ಚಿನ ಪಾದಚಾರಿ ಮಾರ್ಗಗಳಲ್ಲಿ ಹೂ, ಹಣ್ಣು, ಬಟ್ಟೆ, ಚಪ್ಪಲಿ, ಮಿರ್ಚಿ–ಮಂಡಕ್ಕಿ, ಉಪಾಹಾರ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಮೇನ್‌ ಬಜಾರ್‌ ಹಾಗೂ ಕಾಲೇಜು ರಸ್ತೆಯಲ್ಲಿ ಹೋಟೆಲ್‌ಗಳವರು ಪಾದಚಾರಿ ಮಾರ್ಗಗಳಲ್ಲಿ ಆಸನ, ಮೇಜುಗಳನ್ನು ಇಟ್ಟಿದ್ದಾರೆ. ಗ್ರಾಹಕರು ಅಲ್ಲಿಯೇ ಕುಳಿತುಕೊಂಡು ಉಪಾಹಾರ, ಊಟ ಮಾಡುತ್ತಾರೆ.

ADVERTISEMENT

ಇನ್ನು ಸದಾ ಜನದಟ್ಟಣೆಯಿಂದ ಕೂಡಿರುವ ಬಸ್‌ ನಿಲ್ದಾಣ ರಸ್ತೆಯಲ್ಲಿ ಹಣ್ಣು, ಹೂ ಮಾರಾಟ ಮಾಡಲಾಗುತ್ತದೆ. ಇಡೀ ಪಾದಚಾರಿ ಮಾರ್ಗದುದ್ದಕ್ಕೂ ಅವರೇ ಇರುವುದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿ ಓಡಾಡಿಕೊಂಡು ಹೋಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಪಾದಚಾರಿಗಳಿಗಾಗಿಯೇ ನಿರ್ಮಿಸಿರುವ ಪಾದಚಾರಿ ಮಾರ್ಗ ಅವರ ಉಪಯೋಗಕ್ಕೆ ಇಲ್ಲದಂತಾಗಿದೆ. ಕೇವಲ ಹೆಸರಿಗಷ್ಟೇ ಪಾದಚಾರಿ ಮಾರ್ಗ ಎಂಬಂತಾಗಿದೆ. ಕೆಲ ತಿಂಗಳ ಹಿಂದೆ ನಗರಸಭೆಯವರು ರೋಟರಿ ವೃತ್ತದಲ್ಲಿನ ಕೆಲವು ಗೂಡಂಗಡಿಗಳನ್ನು ಪಾದಚಾರಿ ಮಾರ್ಗದಿಂದ ತೆರವುಗೊಳಿಸಿದ್ದರು. ನಗರದ ಇತರೆ ಕಡೆಗಳಲ್ಲಿಯೂ ತೆರವುಗೊಳಿಸುವ ಮಾತುಗಳನ್ನು ಪೌರಾಯುಕ್ತ ವಿ. ರಮೇಶ ಆಡಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಅಷ್ಟೇ ಅಲ್ಲ, ತೆರವುಗೊಳಿಸಿದ ಗೂಡಂಗಡಿಗಳವರು ಮತ್ತೆ ಅಲ್ಲಿಯೇ ವ್ಯಾಪಾರ ವಹಿವಾಟು ಮುಂದುವರೆಸಿದ್ದಾರೆ.

ಪಾದಚಾರಿ ಮಾರ್ಗವನ್ನು ಉಪಾಹಾರ, ಊಟಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಹೋಟೆಲ್‌ಗಳವರಿಗೆ ನಗರಸಭೆ ತಾಕೀತು ಮಾಡಿತ್ತು. ಆದರೆ, ಆ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತೆ ಹೋಟೆಲ್‌ನವರು ನಡೆದುಕೊಳ್ಳುತ್ತಿದ್ದಾರೆ.

ಮಹಾತ್ಮ ಗಾಂಧಿ ವೃತ್ತ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆ ಬದಿಯಲ್ಲಿಯೇ ಹೂ, ಹಣ್ಣು ಮಾರಾಟ ಮಾಡಲಾಗುತ್ತದೆ. ಈ ಭಾಗದಲ್ಲಿ ಮೊದಲೇ ರಸ್ತೆಗಳು ಕಿರಿದಾಗಿವೆ. ಈ ರೀತಿ ಮಾಡುವುದರಿಂದ ದಾರಿಹೋಕರು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಸದಾ ದಟ್ಟಣೆ ಉಂಟಾಗಿ, ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಹೀಗಿದ್ದರೂ ನಗರಸಭೆಯಾಗಲಿ, ಸಂಚಾರ ಪೊಲೀಸರಾಗಲಿ ಸೂಕ್ತ ಕ್ರಮ ಕೈಗೊಂಡಿಲ್ಲ.

‘ಬೀದಿ ಬದಿ ವ್ಯಾಪಾರಿಗಳಿಗೆ ಇಂತಹುದೇ ಸ್ಥಳ ನಿಗದಿಪಡಿಸಿ ಅವರಿಗೆ ಅನುಕೂಲ ಮಾಡಿಕೊಡಬೇಕು. ಆದರೆ, ಆ ನಿಟ್ಟಿನಲ್ಲಿ ನಗರಸಭೆ ಯಾವುದೇ ಕೆಲಸ ಮಾಡಿಲ್ಲ. ಇದರಿಂದಾಗಿ ಅವರು ಬೇಕಾಬಿಟ್ಟಿಯಾಗಿ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುತ್ತಾರೆ. ಇದರಲ್ಲಿ ಅವರದೇನೂ ತಪ್ಪಿಲ್ಲ. ಅರಿವು ಮೂಡಿಸುವ ಕೆಲಸ ನಗರಸಭೆ ಮಾಡದೇ ಇರುವುದರಿಂದ ಈ ರೀತಿ ಆಗುತ್ತಿದೆ’ ಎನ್ನುತ್ತಾರೆ ನಗರದ ನಿವಾಸಿ ರಾಜೇಶ.

‘ಪಾದಚಾರಿ ಮಾರ್ಗದಲ್ಲಿ ಜನರ ಓಡಾಟಕ್ಕೆ ತೊಂದರೆ ಆಗದಂತೆ ವ್ಯಾಪಾರ ಮಾಡಲು ಬೀದಿ ಬದಿ ವ್ಯಾಪಾರಿಗಳಿಗೆ ಸೂಚಿಸಬೇಕು. ಹೋಟೆಲ್‌ನವರಿಗೆ ಫುಟ್‌ಪಾತ್‌ ಮೇಲೆ ಯಾವುದೇ ರೀತಿಯ ಕಾರುಬಾರು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆಗ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಹೇಳಿದರು.

‘ನಗರಸಭೆ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರಷ್ಟೇ ಪಾದಚಾರಿ ಮಾರ್ಗದ ಅತಿಕ್ರಮಣ ಸಮಸ್ಯೆ ಬಗೆಹರಿಸಬಹುದು. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಕೆಲಸ ಮಾಡಿದರೆ ಯಾವುದೇ ಪ್ರಯೋಜನವಿಲ್ಲ’ ಎಂದು ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.