ಬಳ್ಳಾರಿ: ‘ಅರಣ್ಯ ಪ್ರದೇಶದಲ್ಲಿರುವ ಖನಿಜಗಳ ಬ್ಲಾಕ್‌ಗಳನ್ನು ಹರಾಜಿಗೆ ಒಳಪಡಿಸಲು ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಲಿಖಿತ ಉತ್ತರ ನೀಡಿದೆ.
ಸಂಡೂರಿನ ತಾಲೂಕಿನ ಅರಣ್ಯ ಪ್ರದೇಶದ ದಕ್ಷಿಣ ವಲಯದಲ್ಲಿರುವ ದಟ್ಟಾರಣ್ಯದ ಒಟ್ಟು 217.453 ಎಕರೆ ವ್ಯಾಪ್ತಿಯ ‘ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ’ ಹೆಸರಿನ ಅದಿರು ಬ್ಲಾಕ್ ಅನ್ನು ಅರಣ್ಯ ಇಲಾಖೆಯೊಂದಿಗೆ ಸಂವಹನ ನಡೆಸದೇ ಹರಾಜು ಹಾಕಿದ್ದ ಬಗ್ಗೆ ‘ಪ್ರಜಾವಾಣಿ’ಯ ಫೆ. 24ರ ಸಂಚಿಕೆಯಲ್ಲಿ ‘ಗಣಿ: ಅನುಮತಿ ಇಲ್ಲದೆ ಕಾಡು ಹರಾಜು’ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಊಳೂರು ಸಿದ್ದೇಶ ಎಂಬುವವರು ಸರ್ಕಾರಕ್ಕೆ ದೂರು ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಕಚೇರಿಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಈ ಬಗ್ಗೆ ವಿವರಣೆ ಕೇಳಿದೆ. ಇದಕ್ಕೆ ಉತ್ತರಿಸಿರುವ ಗಣಿ ಇಲಾಖೆ, ‘ ಖನಿಜ ಬ್ಲಾಕ್ ಹರಾಜಿಗೆ ಅರಣ್ಯ ಇಲಾಖೆ ಅನುಮತಿಯನ್ನು ಪಡೆಯಬೇಕಿಲ್ಲ. ಹರಾಜಿನಲ್ಲಿ ಬ್ಲಾಕ್ ಪಡೆದಿರುವ ಬಿಡ್‌ದಾರರು ಅರಣ್ಯ ಅನುಮತಿ ಪಡೆಯಬೇಕಾಗುತ್ತದೆ. ನಂತರವೇ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದಿದೆ.
‘ರಾಜ್ಯದ ಅಭಿವೃದ್ಧಿ ಮತ್ತು ಪರಿಸರ ಸಮತೋಲನವು ಜೊತೆ ಜೊತೆಯಾಗಿ ಸಾಗಬೇಕಾಗಿದೆ. ಅದಿರು, ಖನಿಜಗಳ ಬಳಕೆಯಿಲ್ಲದೇ ಅಭಿವೃದ್ಧಿ ಅಸಾಧ್ಯ. ರಾಜಧನ ಆದಾಯ, ಉದ್ಯೋಗ ಮುಂತಾದವನ್ನು ಪರಿಗಣಿಸಬೇಕಾಗಿದೆ. ಕೇಂದ್ರ ಸರ್ಕಾರವು ರೂಪಿಸಿರುವ ಕಾಯ್ದೆ, ನಿಯಮಗಳನುಸಾರ ಕ್ರಮ ಜರುಗಿಸಬೇಕಾಗಿದೆ’ ಎಂದು ಇಲಾಖೆ ತಿಳಿಸಿದೆ.
‘ಗಣಿಗಾರಿಕೆ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಸಿಇಪಿಎಂಐಝಡ್ ಯೋಜನೆಯಡಿ ಆದ್ಯತೆ ನೀಡಲಾಗಿದೆ. ರೈಲ್ವೆ ಸೈಡಿಂಗ್, ಕನ್ವೆಯರ್ ಬೆಲ್ಟ್‌ಗಳನ್ನು ಮಾಡಲಾಗುತ್ತಿದೆ. ಅದಿರು ಸಾಗಣೆಗಾಗಿ ಪ್ರತ್ಯೇಕವಾಗಿ ಮೈನ್ ಕಾರಿಡಾರ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ. ಅರಣ್ಯ ನಾಶಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ಕೇಂದ್ರ ಅರಣ್ಯ ಇಲಾಖೆಯ ನಿಬಂಧನೆ ಪಾಲಿಸಬೇಕಾಗುತ್ತದೆ. ಪರಿಹಾರಾತ್ಮಕ ಹಣ, ಅರಣ್ಯ ಬೆಳೆಸುವ ಖರ್ಚನ್ನು ಪಾವತಿಸಲಾಗುತ್ತದೆ. ನಂತರವೇ ಗುತ್ತಿಗೆದಾರರಿಗೆ ಗಣಿಗಾರಿಕೆಗೆ ಅರಣ್ಯ ಅನುಮತಿ ದೊರೆಯುತ್ತದೆ’ ಎಂದು ಗಣಿ ಇಲಾಖೆ ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.