ADVERTISEMENT

ಕೋಟೆ ಗೋಡೆ ನೆಲಸಮಕ್ಕೆ ಖಂಡನೆ, ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:35 IST
Last Updated 17 ಜೂನ್ 2019, 14:35 IST
ಹಿಂದೂ ಜಾಗರಣ ವೇದಿಕೆಯ ಮುಖಂಡರು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಪನಿರ್ದೇಶಕ ಕಚೇರಿಯ ಸಹಾಯಕ ಮಂಜುನಾಥ್ ನಾಯಕ ಅವರಿಗೆ ಮನವಿ ಸಲ್ಲಿಸಿದರು
ಹಿಂದೂ ಜಾಗರಣ ವೇದಿಕೆಯ ಮುಖಂಡರು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಪನಿರ್ದೇಶಕ ಕಚೇರಿಯ ಸಹಾಯಕ ಮಂಜುನಾಥ್ ನಾಯಕ ಅವರಿಗೆ ಮನವಿ ಸಲ್ಲಿಸಿದರು   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಬಳಿಯ ಕಂಪ್ಲಿ ರಸ್ತೆಯಲ್ಲಿರುವ ಕೋಟೆ ಗೋಡೆಯನ್ನು ನೆಲಸಮಗೊಳಿಸಿರುವ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ.

ಈ ಸಂಬಂಧ ವೇದಿಕೆಯ ಪದಾಧಿಕಾರಿಗಳು ಸೋಮವಾರ ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

’ಜೆ.ಸಿ.ಬಿ.ಯಿಂದ ಹಾಡಹಗಲಲ್ಲೇ ಐತಿಹಾಸಿಕ ಸ್ಮಾರಕವನ್ನು ಧ್ವಂಸಗೊಳಿಸಿದ್ದು ಸರಿಯಲ್ಲ. ಡಿ.ವೈ.ಎಸ್‌.ಪಿ. ಕಚೇರಿಯಿಂದ ಕೂಗಳತೆ ದೂರದಲ್ಲಿ ಕೋಟೆ ಇದೆ. ಇಷ್ಟೆಲ್ಲ ನಡೆದರೂ ಪೊಲೀಸರೂ ಎಚ್ಚರ ವಹಿಸದಿರುವುದು ದೊಡ್ಡ ಲೋಪ. ಸ್ವಾರ್ಥಕ್ಕಾಗಿ ಕೆಲವರು ಕೋಟೆ ಗೋಡೆ ಹಾಳುಗೆಡವಿದ್ದಾರೆ. ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಆ ಜಾಗವನ್ನು ತನ್ನ ವಶಕ್ಕೆ ಪಡೆದು, ಇಲಾಖೆ ಸಂರಕ್ಷಿಸಬೇಕು. ಒಡೆದಿರುವ ಗೋಡೆ ಜಾಗದಲ್ಲಿ ಹೊಸದನ್ನು ನಿರ್ಮಿಸಬೇಕು‘ ಎಂದು ಒತ್ತಾಯಿಸಿದ್ದಾರೆ.

ADVERTISEMENT

ವೇದಿಕೆಯ ಪ್ರಾಂತ ಕಾರ್ಯದರ್ಶಿ ಅಯ್ಯನಗೌಡ ಹೇರೂರು, ವಿಭಾಗ ಕಾರ್ಯದರ್ಶಿ ಮೌನೇಶ್‌ ಬಡಿಗೇರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಕುಮಾರ್‌,ಸಿದ್ದಪ್ಪ ಪೂಜರ್, ಗಣೇಶ್ ನೀರ್ಲಿಗಿ ಮನವಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.