ADVERTISEMENT

ಬಳ್ಳಾರಿ | ವಾಜಪೇಯಿ ಉದ್ಯಾನದಲ್ಲಿ ನಾಲ್ವರೇ ಕಾಯಂ!

149 ಹೆಕ್ಟೇರ್‌ ಪ್ರದೇಶದಲ್ಲಿ ಹುಲಿ, ಸಿಂಹ ಹಾಗೂ ಜಿಂಕೆ ಸಫಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಜುಲೈ 2019, 19:41 IST
Last Updated 18 ಜುಲೈ 2019, 19:41 IST
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿನ ಹುಲಿ ಸಫಾರಿಗೆ ಹೋಗುವ ಪ್ರವೇಶ ದ್ವಾರ
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿನ ಹುಲಿ ಸಫಾರಿಗೆ ಹೋಗುವ ಪ್ರವೇಶ ದ್ವಾರ   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್‌ ಸಂರಕ್ಷಿತ ಅರಣ್ಯದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ನಾಲ್ವರಷ್ಟೇ ಕಾಯಂ ನೌಕರರಿದ್ದಾರೆ.

ಅದು ಕೂಡ ಅಧಿಕಾರಿ ವರ್ಗ ಎನ್ನುವುದು ವಿಶೇಷ. ಇತ್ತೀಚೆಗೆ ನಿವೃತ್ತರಾದ ಡಿ.ಎಫ್‌.ಒ. ಪುರುಷೋತ್ತಮ ಅವರ ಜಾಗಕ್ಕೆ ಸೋನಾಲಿ ರುತ್ತಿ ನೇಮಕಗೊಂಡಿದ್ದು, ಇನ್ನಷ್ಟೇ ಅವರು ಅಧಿಕಾರ ಸ್ವೀಕರಿಸಬೇಕು. ಅವರನ್ನು ಹೊರತುಪಡಿಸಿದರೆ ವಲಯ ಅರಣ್ಯ ಅಧಿಕಾರಿ ರಮೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಪರಮೇಶ್ವರಯ್ಯ ಸೇರಿದ್ದಾರೆ.

ವೈದ್ಯ, ಜೀವಶಾಸ್ತ್ರಜ್ಞ, ಎಂಜಿನಿಯರ್‌, ಕಂಪ್ಯೂಟರ್‌ ಆಪರೇಟರ್‌, ವಾಹನ ಚಾಲಕರು, ಸ್ವಚ್ಛತೆ ಕೈಗೊಳ್ಳುವವರು ಸೇರಿದಂತೆ ಒಟ್ಟು 18 ಜನ ಗುತ್ತಿಗೆ ನೌಕರರಿದ್ದಾರೆ. 149.50 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಉದ್ಯಾನಕ್ಕೆ ಇಷ್ಟು ಸಿಬ್ಬಂದಿ ಸಾಕೇ ಎಂಬ ಪ್ರಶ್ನೆ ಎದುರಾಗಿದೆ.

ADVERTISEMENT

2018ರಲ್ಲಿ ಜಿಂಕೆ ಉದ್ಯಾನ ಆರಂಭಗೊಂಡಾಗ ಇಷ್ಟೇ ಸಂಖ್ಯೆಯಲ್ಲಿ ನೌಕರರಿದ್ದರು. ಹೋದ ಜೂನ್‌21ರಂದು ಹುಲಿ, ಸಿಂಹ ಸಫಾರಿ ಆರಂಭಗೊಂಡಿದೆ. ಹೀಗಿದ್ದರೂ ಅಷ್ಟೇ ಸಿಬ್ಬಂದಿಯೊಡನೆ ಉದ್ಯಾನ ಮುನ್ನಡೆಸಲಾಗುತ್ತಿದೆ. ಹಂತ ಹಂತವಾಗಿ ಬಳ್ಳಾರಿ ಮೃಗಾಲಯದಿಂದ ಚಿರತೆ, ಮೊಸಳೆ, ಹೈನಾ ಸೇರಿದಂತೆ ಇತರೆ ಪ್ರಾಣಿಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಎಂಟು ಜನ ಗುತ್ತಿಗೆ ನೌಕರರನ್ನು ಇಲ್ಲಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಆದರೆ, ಈ ನೌಕರರ ಪೈಕಿ ಬಹುತೇಕರು ಸಫಾರಿ,ಕಾಡುಪ್ರಾಣಿಗಳ ನಿರ್ವಹಣೆ, ಸುರಕ್ಷತೆಯ ವಿಷಯದಲ್ಲಿ ತರಬೇತಿ ಹೊಂದಿದವರಲ್ಲ.

‘ವಾಜಪೇಯಿ ಉದ್ಯಾನ ನೈಸರ್ಗಿಕ ಅರಣ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅನ್ಯ ಭಾಗಗಳ ಕಾಡುಗಳಿಂದ ವನ್ಯಪ್ರಾಣಿಗಳನ್ನು ತಂದು ಇರಿಸಲಾಗಿದೆ. ಸ್ಥಳೀಯ ಅನೇಕ ಸರೀಸೃಪಗಳು ಅಲ್ಲಿವೆ. ಹೆಚ್ಚಿನ ಕಾವಲು ಅಗತ್ಯವಿದೆ. ಅದರಲ್ಲೂ ನುರಿತ ಸಿಬ್ಬಂದಿಯ ಅಗತ್ಯವಿದೆ. ಆದರೆ, ಅವರನ್ನು ನೇಮಕ ಮಾಡಿಕೊಳ್ಳದೆ ಸಫಾರಿ ಆರಂಭಿಸಲಾಗಿದೆ’ ಎನ್ನುತ್ತಾರೆ ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ.

‘ಉದ್ಯಾನದಿಂದ ಸ್ವಲ್ಪವೇ ದೂರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ, ಐಷಾರಾಮಿ ಹೋಟೆಲ್‌, ಕಮಲಾಪುರ ಪಟ್ಟಣ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದಲ್ಲ. ಪ್ರಾಣಿಗಳ ರಕ್ಷಣೆ ಜತೆಗೆ ಸ್ಥಳೀಯರಿಗೂ ಸುರಕ್ಷತೆಯ ಖಾತ್ರಿ ಆಗಬೇಕು. ಕಾಯಂ ಅಲ್ಲದಿದ್ದರೂ ಗುತ್ತಿಗೆ ಆಧಾರಿತ ನೌಕರರನ್ನು ಸೇರಿಸಿಕೊಂಡರೂ ಅವರು ಆ ವಿಷಯದಲ್ಲಿ ನುರಿತವರು ಆಗಿರಬೇಕು. ಅಂತಹವರ ನೇಮಕಕ್ಕೆ ಆದ್ಯತೆ ಸಿಗಬೇಕು. ಉದ್ಯಾನ ಆರಂಭದಿಂದ ಸ್ಥಳೀಯರಿಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಗಿದೆ’ ಎಂದು ಹೇಳಿದರು.

ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ, ‘ಈ ಕುರಿತು ನಾನೇನೂ ಪ್ರತಿಕ್ರಿಯಿಸಲಾರೆ. ಇಷ್ಟರಲ್ಲೇ ಡಿ.ಎಫ್‌.ಒ.ಅಧಿಕಾರ ಸ್ವೀಕರಿಸಲಿದ್ದು, ಅವರು ಮಾಹಿತಿ ನೀಡುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.