ADVERTISEMENT

ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 12:17 IST
Last Updated 14 ಮೇ 2019, 12:17 IST
ಹಿರಿಯ ನಾಗರಿಕರಿಗೆ ಕೃತಕ ಕಾಲು ಜೋಡಿಸುತ್ತಿರುವುದು
ಹಿರಿಯ ನಾಗರಿಕರಿಗೆ ಕೃತಕ ಕಾಲು ಜೋಡಿಸುತ್ತಿರುವುದು   

ಹೊಸಪೇಟೆ: ಎಂ.ಎಸ್.ಪಿ.ಎಲ್‌. ಹಾಗೂ ಜೈಪುರದ ಭಗವಾನ್‌ ಮಹಾವೀರ್‌ ಅಂಗವಿಕಲರ ಸಹಕಾರ ಸಮಿತಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡಿತು.

ಶಿಬಿರದ ಮೊದಲ ದಿನವೇ 250 ಜನ ಹೆಸರು ನೋಂದಣಿ ಮಾಡಿಸಿ, ಶಿಬಿರದಲ್ಲಿ ಭಾಗವಹಿಸಿದ್ದರು. ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಮೈಸೂರು, ಆಂಧ್ರ ಪ್ರದೇಶದ ಕರ್ನೂಲ್‌ ಸೇರಿದಂತೆ ವಿವಿಧ ಭಾಗಗಳಿಂದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

ಸ್ಥಳದಲ್ಲೇ ಕಾಲಿನ ಅಳತೆ ಪಡೆದು, ಅಲ್ಲಿಯೇ ತಯಾರಿಸುವ ಕೆಲಸ ಮುಂದುವರೆದಿತ್ತು. ಪೋಲಿಯೊ ಸೇರಿದಂತೆ ಇತರೆ ಕಾರಣಗಳಿಂದ ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಕ್ಯಾಲಿಪರ್ಸ್‌ಗಳನ್ನು ಅಳವಡಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಇದಕ್ಕೂ ಮುನ್ನ ಎಂ.ಎಸ್‌.ಪಿ.ಎಲ್‌. ಬಲ್ದೋಟ ಸಮೂಹ ಸಂಸ್ಥೆಯ ಅಧ್ಯಕ್ಷ ನರೇಂದ್ರ ಬಲ್ದೋಟ ಅವರು ಶಿಬಿರಕ್ಕೆ ಚಾಲನೆ ನೀಡಿದರು. ‘ಸತತ ಎಂಟು ವರ್ಷಗಳಿಂದ ಈ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಂದ ಯಾವುದೇ ರೀತಿಯ ಶುಲ್ಕ ಪಡೆಯುತ್ತಿಲ್ಲ. ಯಾವ ಭಾಗದವರು, ಯಾರು ಬೇಕಾದರೂ ಶಿಬಿರದಲ್ಲಿ ಭಾಗವಹಿಸಿ ಕೃತಕ ಕಾಲು ಜೋಡಿಸಿಕೊಳ್ಳಬಹುದು’ ಎಂದು ಹೇಳಿದರು.

‘ಅಂಗವಿಕಲರು ಸ್ವಾವಲಂಬಿಗಳಾಗಿ ಅವರ ಕಾಲ ಮೇಲೆ ಅವರು ನಿಲ್ಲಬೇಕು. ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಿದವರು ಕೂಡ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆಯಬಹುದು. ಖಾಸಗಿಯಲ್ಲಿ ಕೃತಕ ಕಾಲು ಅಳವಡಿಸಿಕೊಳ್ಳಬೇಕಾದರೆ ₹5ರಿಂದ ₹6 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಶಿಬಿರದಲ್ಲಿ ಉಚಿತವಾಗಿ ಅಳವಡಿಸಲಾಗುತ್ತದೆ. ಅಗತ್ಯ ಇರುವವರು ಪ್ರಯೋಜನ ಪಡೆದುಕೊಳ್ಳಬೇಕು. ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾದವರಿಗೆ ಮೂರು ಚಕ್ರದ ಬೈಸಿಕಲ್‌ ವಿತರಿಸಲಾಗುವುದು’ ಎಂದು ವಿವರಿಸಿದರು.

ಭಗವಾನ್‌ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಉಸ್ತುವಾರಿ ಅನಿಲ್‌ ಸುರಾನ್‌, ಡಾ. ವಿಶ್ವನಾಥ ದೀಪಾಲಿ, ಡಾ. ಲವಿನಾ ಬಲ್ದೋಟ, ಕಾರ್ಯನಿರ್ವಾಹಕ ನಿರ್ದೇಶಕ ಕೆ. ಪ್ರಭು, ಉಪಾಧ್ಯಕ್ಷ ಪ್ರವೀಣ ಸಿಂಗ್‌, ಮೇಧಾ ವೆಂಕಟೇಶ, ರಮೇಶ, ಬಿ.ಎಂ. ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.