ADVERTISEMENT

ಗಜಗಿನಹಾಳ: 4 ಶಾಲಾ ಕೊಠಡಿ ಶಿಥಿಲ; ಕುಸಿಯುವ ಸ್ಥಿತಿಯಲ್ಲಿ ಚಾವಣಿ

ನಿತ್ಯ ಭಯದಲ್ಲೇ ವಿದ್ಯಾರ್ಥಿಗಳಿಗೆ ಪಾಠ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:57 IST
Last Updated 27 ಜುಲೈ 2025, 2:57 IST
<div class="paragraphs"><p>ಸಿರುಗುಪ್ಪ ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ</p></div>

ಸಿರುಗುಪ್ಪ ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ

   

ಸಿರುಗುಪ್ಪ: ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಕೊಠಡಿಗಳು ಶಿಥಿಲಗೊಂಡಿವೆ. ನಿತ್ಯ ಭಯದ ನೆರಳಿನಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿದೆ.

ಶಾಲೆಯಲ್ಲಿ 1ರಿಂದ 6ನೇ ತರಗತಿಯವರೆಗೆ 52 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿ 4 ಕೊಠಡಿಗಳಿವೆ. ಒಂದು ಕೊಠಡಿಯಲ್ಲಿ ಮುಖ್ಯ ಶಿಕ್ಷಕರು ತಮ್ಮ ಕಚೇರಿಯ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನಲಿಕಲಿ ಕೊಠಡಿಯನ್ನು ಕಾಂಪೌಂಡ್ ಕಾಮಗಾರಿಯ ಪರಿಕರಗಳನ್ನು ಇಡಲು ಬಳಸಲಾಗಿದೆ. ಇನ್ನೊಂದು ಕೊಠಡಿಯನ್ನು ಬಿಸಿಯೂಟಕ್ಕೆ ಉಪಯೋಗಿಸಲಾಗುತ್ತಿದೆ.

ADVERTISEMENT

1ರಿಂದ 6ನೇ ತರಗತಿಯ 52 ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. 4 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಯಾವಾಗ ಚಾವಣಿ ಕುಸಿದು ಬೀಳುತ್ತದೆ ಎಂಬ ಭಯ, ಆತಂಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಾಡುತ್ತಿದೆ.

ಮಳೆಗಾಲ ಇರುವುದರಿಂದ ಹೆಚ್ಚಿನ ಮಳೆ ಬಂದಲ್ಲಿ ಮಕ್ಕಳಿಗೆ ಶಾಲೆ ರಜೆ ಅನಿವಾರ್ಯ. ಕೊಠಡಿಯು ಸೋರುತ್ತಿದೆ. ಶಾಲಾ ಕಟ್ಟಡ ನಿರ್ಮಾಣಕ್ಕಾಗಿ, ಶಾಲಾ ಕೊಠಡಿಗಳ ದುರಸ್ತಿಗಾಗಿ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜವಾಗಿಲ್ಲ ಎನ್ನಲಾಗಿದೆ. 

05-ಸಿರುಗುಪ್ಪ-03 : ಸಿರುಗುಪ್ಪ ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ4 ಕೊಠಡಿಗಳು ಶಿಥಿಲಗೊಂಡಿರುವುದು.
ಅಧಿಕಾರಿಗಳು ನಮ್ಮ ಮನವಿ ನಿರ್ಲಕ್ಷಿಸುತ್ತಿದ್ದಾರೆ. ಶಾಲೆಯಲ್ಲಿ ಏನಾದರೂ ಅವಘಡ ಸಂಭವಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ 
– ಮರಿಯಪ್ಪ ಗಜಗಿನಹಾಳ, ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ
ಹೊಸ ಶಾಲಾ ಕಟ್ಟಡ ನಿರ್ಮಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈಚೆಗೆ ಸುರಿದ ಮಳೆಗೆ ಶಾಲೆಯ ಚಾವಣಿಯ ಪದರು ಕುಸಿದಿದ್ದು ಮೇಲಿನವರಿಗೆ ತಿಳಿಸಲಾಗುವುದು
– ಹನುಮಂತ ರೆಡ್ಡಿ ಮುಖ್ಯ ಶಿಕ್ಷಕ ಗಜಗಿನಹಾಳ ಶಾಲೆ
ಗಜಗಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ದುರಸ್ತಿಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ
– ಎಚ್.ಗುರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.