ಬಳ್ಳಾರಿ: ‘ನನ್ನ ಮತ್ತು ಶ್ರೀರಾಮುಲು ನಡುವೆ ಯಾರ ಮಧ್ಯಸ್ಥಿಕೆ ಬೇಕಾಗಿಲ್ಲ’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ತಮ್ಮ ಪುತ್ರ ಕಿರೀಟಿ ಅಭಿನಯದ ಚಲನಚಿತ್ರ ‘ಜೂನಿಯರ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಗರದ ಸಿನಿಮಾ ಮಂದಿರವೊಂದಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ಇಬ್ಬರ ನಡುವಿನ ಮುನಿಸು ಶಮನ ಮಾಡಲು ನಾಯಕರು ದೆಹಲಿಗೆ ಕರೆದಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮಿಬ್ಬರ ಮಧ್ಯೆ ಯಾರು ಬೇಕಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಾಮುಲು ಮತ್ತು ನನ್ನ ನಡುವಿನ ಸ್ನೇಹ ಸಾಮಾನ್ಯದ್ದಲ್ಲ. ಹದಿನೈದು ಹದಿನಾರು ವಯಸ್ಸಿನವರಿದ್ದಾಗಿನಿಂದಲೂ ಸ್ನೇಹವಿದೆ. ನಲವತ್ತು ವರ್ಷದಿಂದ ಜೊತೆಗಿದ್ದೇವೆ. ಶೀಘ್ರದಲ್ಲೇ ರಾಮುಲು ನಾನು ಇಬ್ಬರೂ ಒಟ್ಟಿಗೆ ಜೂನಿಯರ್ ಸಿನಿಮಾ ನೋಡ್ತೇವೆ’ ಎಂದು ಹೇಳಿದರು.
ಸಹೋದರ ಸೋಮಶೇಖರ್ ರೆಡ್ಡಿ, ಪತ್ನಿ ಅರಣಾ, ಮಗ ಕಿರಿಟಿ ಜೊತೆಗೆ ಸಿನಿಮಾ ನೋಡಿದ ಜನಾರ್ದನ ರೆಡ್ಡಿ, ‘ಸಿನಿಮಾ ಅದ್ಭುತವಾಗಿದೆ. ಕಿರೀಟಿಗೆ ಚಿಕ್ಕವನಿದ್ದಾಗಿನಿಂದಲೂ ಸಿನಿಮಾ ಬಗ್ಗೆ ಅಸಕ್ತಿ ಇತ್ತು. ಮಗ ಸಿನಿಮಾ ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಗಮನ ಕೊಟ್ಟಿಲ್ಲ. ಪುನೀತ್ ರಾಜ್‌ಕುಮಾರ ಮತ್ತು ಎನ್‌ಟಿಅರ್ ಅವರನ್ನು ನೋಡಿಕೊಂಡು ಬೆಳೆದಿದ್ದಾನೆ. ‘ಜೂನಿಯರ್’ ಸಿನಿಮಾ ಯಶಸ್ವಿಯಾಗಲಿದೆ’ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.