ಬಳ್ಳಾರಿ: ‘ಗಾಂಧೀಜಿ ಅವರ ಸತ್ಯ, ಅಹಿಂಸೆಯ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯೋಣ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಯುವ ಪೀಳಿಗೆಯು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಮಾತನಾಡಿ, ‘ಗಾಂಧೀಜಿ ಅವರು ‘ನನ್ನ ಜೀವನವೇ ನನ್ನ ಸಂದೇಶ’ ಎಂದು, ಲಾಲ್ ಬಹದ್ದೂರು ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಎಂದು ಹೇಳಿದ್ದಾರೆ. ಈ ಇಬ್ಬರು ಮಹಾನ್ ನಾಯಕರ ಆದರ್ಶ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ’ ಎಂದರು.
ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ‘1921ರ ಅ.1ರಂದು ಗಾಂಧೀಜಿ ಅವರು ಪ್ರಥಮ ಬಾರಿಗೆ ಬಳ್ಳಾರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಬಳ್ಳಾರಿ ರೈಲು ನಿಲ್ದಾಣದಲ್ಲಿ ತಂಗಿದ್ದರು’ ಎಂದು ಸ್ಮರಿಸಿದರು.
ಉಪನ್ಯಾಸಕ ಅಮಾತಿ ಬಸವರಾಜ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸರ್ವಧರ್ಮ ಗ್ರಂಥಗಳ ಪಠಣ ಮಾಡಿದರು.
ಬಾಪೂಜಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.