ADVERTISEMENT

ಕೂಡ್ಲಿಗಿಯಲ್ಲಿ ಗಾಂಧೀಜಿ ಚಿತಾಭಸ್ಮ: ಕಾಯಕಲ್ಪಕ್ಕೆ ಕಾದಿರುವ ರಾಷ್ಟ್ರೀಯ ಸ್ಮಾರಕ

ನವದೆಹಲಿಯ ರಾಜಘಾಟ್‌ ಬಿಟ್ಟರೆ ಕೂಡ್ಲಿಗಿಯಲ್ಲಿದೆ

ಎ.ಎಂ.ಸೋಮಶೇಖರಯ್ಯ
Published 2 ಫೆಬ್ರುವರಿ 2019, 19:30 IST
Last Updated 2 ಫೆಬ್ರುವರಿ 2019, 19:30 IST
ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕದ ಮುಖ್ಯ ಗೇಟಿಗೆ ಅಳವಡಿಸಿದ್ದ ಗ್ರಾನೈಟ್ ಕಿತ್ತು ಹೋಗಿರುವುದು
ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕದ ಮುಖ್ಯ ಗೇಟಿಗೆ ಅಳವಡಿಸಿದ್ದ ಗ್ರಾನೈಟ್ ಕಿತ್ತು ಹೋಗಿರುವುದು   

ಕೂಡ್ಲಿಗಿ: ಇಲ್ಲಿನ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಪವಿತ್ರ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಇಪ್ಪತ್ತು ವರ್ಷಗಳಿಂದ ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ನವದೆಹಲಿಯ ರಾಜಘಾಟ್‌ ಬಿಟ್ಟರೆ ಗಾಂಧೀಜಿ ಅವರ ಚಿತಾಭಸ್ಮವಿರುವ ಸ್ಮಾರಕವಿರುವುದು ಪಟ್ಟಣದಲ್ಲಿ. ಇದು ಅಭಿವೃದ್ಧಿಗೊಂಡು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆಯಬೇಕಿತ್ತು. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ.

ಗಾಂಧೀಜಿ ನಿಧನದ ನಂತರ ಅವರ ಚಿತಾಭಸ್ಮವನ್ನು ಇಲ್ಲಿಗೆ ತರಲಾಗಿತ್ತು. ಶಿಕ್ಷಕ ಬಿಂದು ಮಾಧವಎಂಬುವರು ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣಕ್ಕೆ ಗಾಂಧಿ ಚಿತಾಭಸ್ಮ ತಂದು, ಮಂಟಪ ಮಾಡಿ, ಅದಕ್ಕೆ ಹುತಾತ್ಮರ ಸ್ಮಾರಕ ಎಂದು ನಾಮಕರಣ ಮಾಡಿದರು. ಗಾಂಧೀಜಿಯವರ ನೆನಪು ಸದಾ ಜನಮಾನಸದಲ್ಲಿ ಉಳಿಯುವಂತೆ ಶ್ರಮಿಸಿದರು. ಆದರೆ, ಅದನ್ನು ಅಭಿವೃದ್ಧಿಗೊಳಿಸಬೇಕೆಂಬ ಹಕ್ಕೊತ್ತಾಯಕ್ಕೆ ಯಾರೊಬ್ಬರೂ ಇದುವರೆಗೆ ಕಿವಿಗೊಟ್ಟಿಲ್ಲ.

ADVERTISEMENT

2008ರಲ್ಲಿ ಅಂದಿನ ಶಾಸಕ ಬಿ. ನಾಗೇಂದ್ರ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ₹59 ಲಕ್ಷ ಅನುದಾನ ತಂದಿದ್ದರು. ಈ ಪೈಕಿ ₹20 ಲಕ್ಷ ವೆಚ್ಚದಲ್ಲಿ ಸ್ಮಾರಕದ ಸುತ್ತ ಕಾಂಪೌಂಡ್‌, ಗ್ರಾನೈಟ್‌ ಗೋಳ ನಿರ್ಮಿಸಿರುವುದು ಬಿಟ್ಟರೆ ಬೇರೇನೂ ಕೆಲಸವಾಗಿಲ್ಲ.

‘ನೀಲನಕಾಶೆ ಪ್ರಕಾರ ಅಭಿವೃದ್ಧಿ ಕೆಲಸ ಆಗಿಲ್ಲ. ಗ್ರಾನೈಟ್‌ಗಳು ಅಲ್ಲಲ್ಲಿ ಕುಸಿದು ಬಿದ್ದಿವೆ. ವಿದ್ಯುತ್‌ ದೀಪಗಳು ತಲೆಕೆಳಗಾಗಿವೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುತ್ತಾರೆ’ ಸಾರ್ವಜನಿಕರು.

2018ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ₹2.50 ಕೋಟಿ ವೆಚ್ಚದ ಸ್ಮಾರಕ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಇಲ್ಲಿಯವರೆಗೆ ಕೆಲಸ ಆರಂಭವಾಗಿಲ್ಲ.

’ಹಾಲಿ ಶಾಸಕಎನ್.ವೈ. ಗೋಪಾಲಕೃಷ್ಣ ಅವರು ಸ್ಮಾರಕದ ಮೇಲಿನ ಶಿಥಿಲ ಚಾವಣಿ ತೆಗೆಸಿದ್ದಾರೆ. ಹೊಸ ಚಾವಣಿ ನಿರ್ಮಾಣಕ್ಕೆ ಜಿಲ್ಲಾ ಆಡಳಿತ ₹50 ಲಕ್ಷ ಬಿಡುಗಡೆ ಮಾಡಿದೆ. ಆದರೆ, ಸ್ಮಾರಕದ ಸಂಪೂರ್ಣ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲ ನಕಾಶೆ ಸಿದ್ಧಗೊಂಡಿಲ್ಲ’ ಎಂದು ನಿರ್ಮಿತಿ ಕೇಂದ್ರದ ಸಹಾಯಕ ಎಂಜನಿಯರ್ ವಿನೋದ್ ಕುಮಾರ್ ತಿಳಿಸಿದರು.

‘ಸಂಪುಟದಲ್ಲಿ ಜಿಲ್ಲೆಯ ಇಬ್ಬರು ಸಚಿವರಿದ್ದಾರೆ. ಅವರು ಸ್ಮಾರಕದ ಅಭಿವೃದ್ಧಿಗೆ ಗಮನ ಹರಿಸಿ, ಕ್ರಮ ಕೈಗೊಳ್ಳಬೇಕು’ ಎಂದು ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.