ADVERTISEMENT

ಜವಳಿ ಕ್ಲಸ್ಟರ್‌ ಸ್ಥಾಪನೆಗೆ ಶೀಘ್ರ ಕ್ರಮ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 7:50 IST
Last Updated 21 ಫೆಬ್ರುವರಿ 2019, 7:50 IST
ಉಗ್ರಪ್ಪ
ಉಗ್ರಪ್ಪ   

ಬಳ್ಳಾರಿ: ‘ರಾಜ್ಯ ಸರ್ಕಾರ ಘೋಷಿಸಿರುವಂತೆ ಜಿಲ್ಲೆಯಲ್ಲಿ ಜವಳಿ ಕ್ಲಸ್ಟರ್‌ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸದ ವಿ.ಎಸ್‌.ಉಗ್ರಪ್ಪ ತಿಳಿಸಿದರು.

‘ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ 5ರಿಂದ 10 ವರ್ಷಗಳ ಅವಧಿಯಲ್ಲಿ ಬಂಡವಾಳ ಹೂಡಲು ನಾಲ್ಕು ಕಂಪನಿಗಳು ಮುಂದೆ ಬಂದಿವೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕುಡತಿನಿಯಲ್ಲಿ ಘಟಕ ಸ್ಥಾಪಿಸಲು ಶಾಹಿ ಎಕ್ಸ್‌ಪೋರ್ಟ್‌ ಪ್ರೈ ಲಿ 20 ಎಕರೆ ಜಮೀನಿಗಾಗಿ ಬೇಡಿಕೆ ಸಲ್ಲಿಸಿದೆ. ಗೋಕುಲ ಎಕ್ಸ್‌ಪೋರ್ಟ್‌ ಲಿ, ರಾಯಲ್‌ ಇಂಟೆಕ್ಸ್ ಅಪರೆಲ್‌ ಹಾಗೂ ಬನ್ನಾರಿ ಟೆಕ್ಸ್‌ಟೈಲ್‌ ಪಾರ್ಕ್ ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಇವುಗಳಲ್ಲಿ ಕೆಲವು ಕಂಪೆನಿಗಳು ಕೊಪ್ಪಳದಲ್ಲೂ ಬಂಡವಾಳ ಹೂಡಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಫುಡ್‌ಪಾರ್ಕ್‌: ‘ತುಮಕೂರಿನಲ್ಲಿರುವಂತೆ ಬಳ್ಳಾರಿಯಲ್ಲೂ ಫುಡ್‌ ಪಾರ್ಕ್‌ ಸ್ಥಾಪನೆಗೆ ಒತ್ತು ನೀಡಬೇಕು. ಅದಕ್ಕಾಗಿ ಜಮೀನು ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವೆ’ ಎಂದರು.

‘ಕೈಗಾರಿಕೆ ಸ್ಥಾಪನೆಗೆ ಜಮೀನು ಪಡೆದ ಬ್ರಹ್ಮಿಣಿ ಸ್ಟೀಲ್ಸ್‌ ಹರಗಿನಡೋಣಿ–ಕುಡುತಿನಿ ನಡುವೆ ಹೆದ್ದಾರಿ ಬಂದ್‌ ಮಾಡಿದ್ದನ್ನು ತೆರವುಗೊಳಿಸಲಾಗಿದೆ. ಸ್ಥಳೀಯರ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು’ ಎಂದರು.

‘ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಬರಗಾಲಪೀಡಿತವಾಗಿವೆ. ಕೇಂದ್ರ ಸರ್ಕಾರ ಹಿಂದಿನ ವರ್ಷದ್ದೇ 1.50 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿಲ್ಲ. ಮೇವು, ಕುಡಿಯುವ ನೀರು ಮತ್ತು ಉದ್ಯೋಗಕ್ಕೆ ಬೇಕಾದ ಅನುದಾನವನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.