ADVERTISEMENT

ಬಳ್ಳಾರಿ: ಮಾಸಾಶನ, ಪೌಷ್ಟಿಕ ಆಹಾರಕ್ಕೆ ಸಂಗಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 16:19 IST
Last Updated 19 ಮಾರ್ಚ್ 2023, 16:19 IST
   

ಬಳ್ಳಾರಿ: ನೆರೆಯ ಆಂಧ್ರದಂತೆ ಎಚ್ಐವಿ ಸೋಂಕಿತರಿಗೆ ಮಾಸಿಕ ₹ 2000 ಮಾಸಾಶನ ಹಾಗೂ ಪೌಷ್ಟಿಕ ಆಹಾರ ಒದಗಿಸಲು ರಾಜ್ಯ ಸರ್ಕಾರ ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ ಸಂಗಂ ಆಗ್ರಹಿಸಿದೆ.

ಎಚ್‌ಐವಿ ಸೋಂಕಿತರನ್ನು ಸಮಾಜ ಅತೀ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಈ ಮನಸ್ಥಿತಿ ಬದಲಾಗಬೇಕು. ಈ ಸಂಬಂಧ ಜಾರಿಗೊಳಿಸಿರುವ ಕಾನೂನು ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಂಸ್ಥೆಯ ನಿರ್ದೇಶಕಿ ನಿಷಾ ಗೂಳೂರು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ 4,700 ಜನ ಎಆರ್‌ಟಿ ಮಾತ್ರೆ ತೆಗೆದುಕೊಳ್ಳುತ್ತಾರೆ. ಅವರಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಪೌಷ್ಟಿಕ ಆಹಾರ ತೆಗೆದುಕೊಳ್ಳಲು ಆರ್ಥಿಕ ಚೈತನ್ಯವಿಲ್ಲ. ಈ ಕಾರಣಕ್ಕೆ ಸರ್ಕಾರವೇ ಪೂರೈಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ನ್ಯಾಕೋದಿಂದ ಎಚ್‌ಐವಿ ನಿಯಂತ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದರಿಂದ ಎಚ್‌ಐವಿ ಸೋಂಕಿತರ ಬದುಕಿಗೆ ಸಹಕಾರಿಯಾಗಿಲ್ಲ. ಅಪೌಷ್ಟಿಕತೆಯಿಂದಾಗಿ ಚಿಕಿತ್ಸೆ ಫಲಿಸುತ್ತಿಲ್ಲ ಎಂದು ಅವರು ವಿವರಿಸಿದರು.

ಪೌಷ್ಟಿಕ ಆಹಾರದ ಜತೆ ತಪ್ಪದೆ ಔಷಧ ತೆಗೆದುಕೊಳ್ಳುವುದರಿಂದ ಎಚ್‌ಐವಿ ಸೋಂಕಿತರು ಎಲ್ಲರಂತೆ ಸಹಜವಾಗಿ ಬದುಕಬಹುದು. ಬಳ್ಳಾರಿಯಲ್ಲಿ ನಮ್ಮ ಸಂಸ್ಥೆಯ ಜತೆ 61 ಎಚ್‌ಐವಿ ಸೋಂಕಿತರು ಗುರುತಿಸಿಕೊಂಡಿದ್ದು ಅವರಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಈ ಸಂಸ್ಥೆ ಹತ್ತು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ತಮ್ಮ ಸಂಸ್ಥೆಗೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಹಣಕಾಸು ನೆರವು ನೀಡುತ್ತಿದೆ. ಎಫ್‌ಸಿಆರ್‌ಎ ಅನುಮತಿ ಇರುವುದರಿಂದ ವಿದೇಶಿ ನೆರವು ಬರುತ್ತಿದೆ. ಬಂದ ಹಣಕ್ಕೆ ಲೆಕ್ಕ ಕೊಡುತ್ತಿದ್ದೇವೆ. ಲೆಕ್ಕಪತ್ರ ಪರಿಶೀಲನೆ ನಡೆಯುತ್ತಿದೆ ಎಂದು ನಿಷಾ ಸ್ಪಷ್ಟಪಡಿಸಿದರು.

ಎಆರ್‌ಟಿ ಸೆಂಟರ್‌ನ ಹಿರಿಯ ವೈದ್ಯ ಡಾ.ದಿನೇಶ ಡಿ, ಶ್ರೀನಿವಾಸ್, ಪರ್ವಿನ್ ಬಾನು, ಉಮೇಶ್‌ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.