ADVERTISEMENT

ತುರ್ತು ಪರಿಸ್ಥಿತಿ ವೇಳೆ ಹೊಸಪೇಟೆಯಲ್ಲಿ ಅಡಗಿಕೊಂಡಿದ್ದ ಜಾರ್ಜ್‌

ತುರ್ತು ಪರಿಸ್ಥಿತಿ ಹುಲಿಗಿ, ಮುನಿರಾಬಾದ್‌ ಸುತ್ತಮುತ್ತ ಅನೇಕ ದಿನ ಕಳೆದಿದ್ದ ಫರ್ನಾಂಡಿಸ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST
   

ಹೊಸಪೇಟೆ: ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಸಂದರ್ಭದಲ್ಲಿ ಜಾರ್ಜ್‌ ಫರ್ನಾಂಡಿಸ್‌ ಅವರು ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಅನೇಕ ದಿನಗಳನ್ನು ಜನಸಾಮಾನ್ಯರ ನಡುವೆ ಸಾಮಾನ್ಯರಾಗಿ ಕಳೆದಿದ್ದರು.

1975ರಲ್ಲಿಅಂದಿನ ಪ್ರಧಾನಿ ಇಂದಿರಾ ಗಾಂಧಿಯವರುತುರ್ತು ಪರಿಸ್ಥಿತಿ ಘೋಷಿಸಿದ್ದರು. ದೇಶದಾದ್ಯಂತ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ಜಾರ್ಜ್‌ ಫರ್ನಾಂಡಿಸ್‌ ಅವರು ಮೂರು ದಿನ ನಗರದಲ್ಲಿ ಅವಿತುಕೊಂಡಿದ್ದರು.

ಮಾಜಿ ಶಾಸಕ ಜಿ. ಶಂಕರಗೌಡ ಅವರಿಗೆ ಸೇರಿದ ನಗರದ ಮಡ್ಡಿ ಕಟ್ಟೆ ಕುರುಬರ ಓಣಿಯ ನಿವಾಸದಲ್ಲಿ ಜಾರ್ಜ್‌ ರಹಸ್ಯವಾಗಿ ಉಳಿದುಕೊಂಡಿದ್ದರು. ಈ ವಿಷಯವನ್ನು ಶಂಕರಗೌಡ ಅವರ ಮಗ, ರಾಜ್ಯ ಬಿಜೆಪಿ ಕಿಸಾನ್‌ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರಮನಗೌಡ ಅವರೇ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ADVERTISEMENT

‘ನನ್ನ ತಂದೆ ಶಂಕರಗೌಡ ಅವರು ಜಾರ್ಜ್‌ ಫರ್ನಾಂಡಿಸ್‌ ಸೇರಿದಂತೆ ಅನೇಕ ಜನ ಸಮಾಜವಾದಿಗಳ ಜತೆ ಉತ್ತಮ ಒಡನಾಟ ಹೊಂದಿದ್ದರು. ಕಾಂಗ್ರೆಸ್‌ ಇಬ್ಭಾಗವಾದಾಗ ಇಂದಿರಾ ಕಾಂಗ್ರೆಸ್‌ನಿಂದ ದೂರ ಇದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ ಜಾರ್ಜ್‌ ಅವರು ನಮ್ಮ ಮನೆಗೆ ಬಂದು ಮೂರು ದಿನ ಉಳಿದುಕೊಂಡಿದ್ದರು’ ಎಂದು ತಿಳಿಸಿದರು.

‘ಆಗ ನಾನಿನ್ನೂ ಚಿಕ್ಕವನಿದ್ದೆ. ನಮ್ಮ ತಂದೆ ಇನ್ನೂ ಶಾಸಕರಾಗಿರಲಿಲ್ಲ. ಆದರೆ, ಮನೆಗೆ ಬಂದು ಹೋಗುವವರನ್ನು ಗುರುತಿಸುತ್ತಿದ್ದೆ. 1975ರಲ್ಲಿ ಅವರು ಬಂದು ಹೋಗಿರುವುದು ಗೊತ್ತಿದೆ. ಆದರೆ, ಯಾವ ದಿನಾಂಕದಂದು ಎಂಬುದು ನೆನಪಿನಲ್ಲಿಲ್ಲ. ಬಂಧಿಸುವ ಭಯ ಇದ್ದ ಕಾರಣ ಯಾರ ಜತೆಗೂ ಭೇಟಿಯಾಗುತ್ತಿರಲಿಲ್ಲ. ಛಾಯಾಚಿತ್ರ ತೆಗೆಸಿಕೊಂಡಿರಲಿಲ್ಲ. ಹೀಗಾಗಿ ಅವರು ತಂಗಿದ್ದ ನೆನಪು ಬಿಟ್ಟರೆ ಬೇರೇನೂ ಇಲ್ಲ’ ಎಂದು ಹೇಳಿದರು.

‘ಜಾರ್ಜ್‌ ಅವರು ಶಂಕರಗೌಡ ಅವರ ಮನೆಯಲ್ಲಿ ಬಚ್ಚಿಕೊಂಡಿದ್ದು ನಿಜ. ಆದರೆ, ಯಾರೊಂದಿಗೂ ಅವರು ಭೇಟಿ ಆಗಿರಲಿಲ್ಲ’ ಎಂದು ಜೆ.ಡಿ.ಎಸ್‌ ಮುಖಂಡ ಕೊಟ್ರೇಶ ತಿಳಿಸಿದರು.

ಹುಲಿಗಿ, ಮುನಿರಾಬಾದ್‌ನಲ್ಲೂ ವಾಸ

ಇಲ್ಲಿನ ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ಹುಲಿಗಿ, ಮುನಿರಾಬಾದ್‌ನಲ್ಲೂ ಜಾರ್ಜ್‌ ಅವರು ಅನೇಕ ದಿನಗಳನ್ನು ಕಳೆದಿದ್ದರು.

‘ಜಾರ್ಜ್‌ ಫರ್ನಾಂಡಿಸ್‌ ಅವರು ಹುಲಿಗಿಯಲ್ಲಿ ಇದ್ದರು. ಅವರನ್ನು ಸ್ಥಳೀಯರು ಯಾರು ಗುರುತಿಸಿರಲಿಲ್ಲ. ಆದರೆ, ಅಂಚೆ ಪೋಸ್ಟ್‌ ಮಾಸ್ಟರ್‌ ಆಗಿದ್ದ ಎಸ್‌.ಎಚ್‌. ಕುಲಕರ್ಣಿ ಅವರು ಜಾರ್ಜ್‌ ಅವರನ್ನು ಗುರುತು ಹಿಡಿದು ಮಾತನಾಡಿಸುತ್ತಾರೆ. ಈ ವಿಷಯವನ್ನು ಕುಲಕರ್ಣಿ ನನ್ನ ಜತೆಗೆ ಹಂಚಿಕೊಂಡಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ ಹವ್ಯಾಸಿ ಪತ್ರಕರ್ತ ಆನಂದ್‌.

‘ಹುಲಿಗಿ ಹಾಗೂ ಮುನಿರಾಬಾದ್‌ನಲ್ಲಿ ಅನೇಕ ದಿನಗಳನ್ನು ಕಳೆದಿದ್ದರು. ಅವರು ಬಹಳ ಸರಳ ಜೀವನ ನಡೆಸುತ್ತಿದ್ದರು. ನಂತರ ವಾಜಪೇಯಿ ಅವರು ಸಂಪುಟದಲ್ಲಿ ಸಚಿವರಾಗಿ ಜಿಲ್ಲೆಗೆ ಒಮ್ಮೆ ಬಂದಾಗ, ಕುಲಕರ್ಣಿ ಅವರನ್ನು ಗುರುತು ಹಿಡಿದು ಮಾತನಾಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.