ADVERTISEMENT

ಅನ್ನದ ಗಂಜಿಗೆ ಬಿದ್ದ ಬಾಲಕಿ

ಚಿತ್ತವಾಡ್ಗಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 11:42 IST
Last Updated 9 ಆಗಸ್ಟ್ 2019, 11:42 IST
ಅನ್ನದ ಗಂಜಿಗೆ ಬಿದ್ದು ಗಾಯಗೊಂಡಿರುವ ದೀಕ್ಷಾಳಿಗೆ ತಾಯಿ ಸಂತೈಸುತ್ತಿರುವುದು
ಅನ್ನದ ಗಂಜಿಗೆ ಬಿದ್ದು ಗಾಯಗೊಂಡಿರುವ ದೀಕ್ಷಾಳಿಗೆ ತಾಯಿ ಸಂತೈಸುತ್ತಿರುವುದು   

ಹೊಸಪೇಟೆ: ನಗರದ ಚಿತ್ತವಾಡ್ಗಿ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಮೂರು ವರ್ಷದ ಬಾಲಕಿ ಅನ್ನದ ಗಂಜಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.

ದೀಕ್ಷಾ ಗಾಯಗೊಂಡ ಬಾಲಕಿ. ಬಾಲಕಿಯ ಬೆನ್ನು, ಎಡಗೈ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ’ಅಡುಗೆ ಮನೆಯಲ್ಲಿ ಅನ್ನ ಬಸಿದು ಒಂದು ಬದಿಯಲ್ಲಿ ಗಂಜಿ ಇಟ್ಟಿದ್ದರು. ಈ ಸಂದರ್ಭದಲ್ಲಿ ನೀರು ಕುಡಿಯಲು ಬಾಲಕಿ ಬಂದಿದ್ದಳು. ಸಹಾಯಕಿ ಕೊಟ್ಟ ನೀರು ಕುಡಿದು ಹೋಗುವಾಗ ಬಾಲಕಿ ಗಂಜಿಯಲ್ಲಿ ಬಿದ್ದಿದ್ದಾಳೆ. ಕೂಡಲೇ ಬಾಲಕಿಯ ಪೋಷಕರನ್ನು ಕರೆಸಿಕೊಂಡು,ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ನಿರ್ಲಕ್ಷ್ಯ ತೋರಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು‘ ಎಂದು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುದೀಪ್‌ ’ಪ್ರಜಾವಾಣಿ‘ಗೆ ತಿಳಿಸಿದರು.

’ಅಂಗನವಾಡಿಗೆ ಬರುವ ಬಹುತೇಕರು ಕಿರಿಯ ವಯಸ್ಸಿನ ಮಕ್ಕಳಾಗಿರುತ್ತಾರೆ. ಅವರಿಗೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎನ್ನುವುದು ಗೊತ್ತಿರುವುದಿಲ್ಲ. ಅವರ ಮೇಲೆ ಸದಾ ನಿಗಾ ವಹಿಸಿರಬೇಕು. ಆದರೆ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಸಹಾಯಕಿಯ ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ. ಒಂದುವೇಳೆ ಅವರು ಎಚ್ಚರ ವಹಿಸಿದ್ದರೆ ನನ್ನ ಮಗಳು ಅಡುಗೆ ಮನೆಗೆ ಹೋಗುತ್ತಿರಲಿಲ್ಲ. ಇಬ್ಬರ ಬೇಜವಾಬ್ದಾರಿತನದಿಂದ ಈ ಘಟನೆ ಜರುಗಿದೆ. ಅವರ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಕೊಡುತ್ತೇನೆ‘ ಎಂದು ಬಾಲಕಿಯ ತಂದೆ ಶಿವಮೂರ್ತಿ ತಿಳಿಸಿದರು.

ADVERTISEMENT

’ನನ್ನ ಮಗಳು ಗಾಯಗೊಂಡ ಬಳಿಕ ಕೂಡಲೇ ಆಂಬ್ಯುಲೆನ್ಸ್‌ ಕರೆಸಿ ಆಸ್ಪತ್ರೆಗೆ ಕರೆ ತರಬೇಕಿತ್ತು. ಆ ಕೆಲಸ ಮಾಡಲಿಲ್ಲ. ಬದಲಾಗಿ ನಾವು ಬರುವುದನ್ನು ಕಾದು ಕುಳಿತಿದ್ದಾರೆ. ಬಂದ ನಂತರ ನನಗೆ ದುಡ್ಡು ಕೊಡಲು ಬಂದಿದ್ದಾರೆ‘ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.