ADVERTISEMENT

ಗೊಲ್ಲರಹಟ್ಟಿ: ಸಂಭ್ರಮದ ಜುಂಜೇಶ್ವರ ಸ್ವಾಮಿ  ಜಾತ್ರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:41 IST
Last Updated 22 ಅಕ್ಟೋಬರ್ 2025, 7:41 IST
ಹರಪನಹಳ್ಳಿ ತಾಲ್ಲೂಕು ಗೊಲ್ಲರಹಟ್ಟಿ ಜುಂಜೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿರುವ ಭಕ್ತಸಮೂಹ
ಹರಪನಹಳ್ಳಿ ತಾಲ್ಲೂಕು ಗೊಲ್ಲರಹಟ್ಟಿ ಜುಂಜೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿರುವ ಭಕ್ತಸಮೂಹ   

ಹರಪನಹಳ್ಳಿ: ಕುಕ್ಕೆ ಸುಬ್ರಹ್ಮಣ್ಯ ಖ್ಯಾತಿಯ ತಾಲ್ಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಸರ್ಪದೋಷ ನಿವಾರಕ ಜುಂಜೇಶ್ವರ ಸ್ವಾಮಿ ಜಾತ್ರೆ ಮಂಗಳವಾರ ಸಡಗರ, ಸಂಭ್ರಮದಿಂದ ಆರಂಭಗೊಂಡಿತು.

400 ವರ್ಷಗಳ ಇತಿಹಾಸ ಹೊಂದಿರುವ ಜುಂಜೇಶ್ವರ ಸ್ವಾಮಿ, ಜನ ಜಾನುವಾರನ್ನು ವಿಷ ಜಂತುಗಳಿಂದ ರಕ್ಷಣೆ ಮಾಡುವ ಆರಾಧ್ಯ ದೈವವೆಂದೆ ಪ್ರಸಿದ್ದಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಸ್ವಾಮಿಗೆ ಎಲೆಪೂಜೆ, ಅಭಿಷೇಕ, ಹಾಗೂ ಗಂಗಾ ಪೂಜೆ ಬಳಿಕ ಕೆಂಡೋತ್ಸವ ಸಂಪ್ರದಾಯಗಳು ಭಕ್ತಬಾವದಿಂದ ಜರುಗಿದವು.

‘ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡು ಕಣ್ತುಂಬಿಕೊಂಡರು. ಇದನ್ನು ದರ್ಶಿಸಿದರೆ ನಾಗದೋಷ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ. ಹಾಗಾಗಿ ಭಕ್ತರು ಹಲ್ಲಿ, ಹಾವು, ಜರಿ, ಚೇಳು ಆಕಾರದ ತಾಮ್ರ, ಬೆಳ್ಳಿಯ ಸಾಮಾಗ್ರಿಗಳನ್ನು ಹರಕೆ ಸಲ್ಲಿಸುತ್ತಾರೆ. ಬೆಲ್ಲದ ಬಂಡಿ ಉತ್ಸವ ಇಲ್ಲಿನ ಮತ್ತೊಂದು ಆಕರ್ಷಣೆ, ಬೆಲ್ಲದ ನೀರನ್ನು ತೀರ್ಥ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಗ್ರಾಮದ ಪುರಾತನ ಬಾವಿಯಿಂದ ತಂದ ನೀರನ್ನು ಎತ್ತಿನಗಾಡಿಯಲ್ಲಿಟ್ಟು ಬಂದು ಭಕ್ತರಿಗೆ ವಿತರಿಸಲಾಗುತ್ತಿದೆ. ‘ಬೆಲ್ಲದ ಬಂಡಿ ನೀರು ಸೇವಿಸಿದರೆ ವಿಷ ಜಂತುಗಳಿಂದ ಕಡಿತಕ್ಕೆ ಒಳಗಾದ ಪ್ರಾಣಿ, ಪಕ್ಷಿ, ಮನುಷ್ಯರ ಪ್ರಾಣಕ್ಕೆ ಅಪಾಯ ಆಗುವುದಿಲ್ಲ.ಸಂತಾನ ಭಾಗ್ಯ, ವಿವಾಹದಲ್ಲಿ ಅಡೆತಡೆಗಳು ಸೇರಿದಂತೆ ಯಾವುದೇ ತರಹದ ದೋಷಗಳು ಪರಿಹಾರಕ್ಕೆ ಇಲ್ಲಿ ಹರಕೆ ಕಟ್ಟಿಕೊಂಡರೆ ಈಡೇರುತ್ತವೆ‘ ಎನ್ನುತ್ತಾರೆ ದೇವಸ್ಥಾನ ಸಮಿತಿ ಮುಖಂಡ ಹುಲಿಕಟ್ಟೆ ದಾಸಪ್ಪ.

ADVERTISEMENT

ಶಿರಾದಿಂದ ಬಂದ ಜುಂಜೇಶ್ವರ: 400 ವರ್ಷಗಳ ಹಿಂದೆ ಗೊಲ್ಲರಹಟ್ಟಿಯಲ್ಲಿ ಹುಚ್ಚು ನಾಯಿ ದಾಳಿ ಸಾಂಕ್ರಾಮಿಕ ಸೋಂಕು ತಗುಲಿತ್ತು, ಇದರ ಪರಿಣಾಮ ಹಟ್ಟಿಯೇ ಒದ್ದಾಡಿತ್ತು. ಅಂಟಿದ್ದ ಸೋಂಕು ವಾಸಿ ಮಾಡಲು ಶಿರಾ ತಾಲ್ಲೂಕು ಬೇವಿನಹಳ್ಳಿಯಿಂದ ಜುಂಜೇಶ್ವರನ ಪ್ರತಿರೂಪ ತಂದು ಗೊಲ್ಲರಹಟ್ಟಿಯಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಗೊಲ್ಲರಹಟ್ಟಿಗೆ ಜೋತುಬಿದ್ದಿದ್ದ ಸೋಂಕು ತೊಲಗಲು ಆರಂಭಿಸಿತ್ತು. ಹಟ್ಟಿಯ ಜನರು ಅಂದಿನಿಂದ ದೀಪಾವಳಿ ದಿನ ಜುಂಜೇಶ್ವರ ಸ್ವಾಮಿ ಜಾತ್ರೆ ಮಾಡಲು ಆರಂಭಿಸಿದ್ದಾರೆ ಎನ್ನುವ ಐತಿಹ್ಯವಿದೆ.

ಜಾತ್ರೆ ನಿಮಿತ್ತ ಪಿಎಸ್ಐ ವಿಜಯಕೃಷ್ಣ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು. ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಗುಮಾಸ್ತ ಗಂಗಾಧರ, ಹುಲಿಕಟ್ಟೆ ದಾಸಪ್ಪ, ದಾಸಪ್ಪ ಹನುಮಂತಪ್ಪ, ರಮೇಶ್, ಚಿಕ್ಕಪ್ಪ, ನಾಗೇಂದ್ರಪ್ಪ, ಗಿರೀಶ ಮಲ್ಲೇಶಪ್ಪ, ಹೇಮಣ್ಣ, ಜೆ.ರಮೇಶ್ ಇದ್ದರು.

ಹರಪನಹಳ್ಳಿ ತಾಲ್ಲೂಕು ಗೊಲ್ಲರಹಟ್ಟಿ ಜುಂಜೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿರುವ ಭಕ್ತಸಮೂಹ.
 ಹರಪನಹಳ್ಳಿ ತಾಲ್ಲೂಕು ಗೊಲ್ಲರಹಟ್ಟಿಯಲ್ಲಿ ಜುಂಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆಂಡೋತ್ಸವಕ್ಕೆ ಸಿದ್ಧತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.