ADVERTISEMENT

ರಂಗಭೂಮಿಯ ಅನನ್ಯ ರತ್ನ ವಂದನಾ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಅಕ್ಟೋಬರ್ 2018, 19:30 IST
Last Updated 14 ಅಕ್ಟೋಬರ್ 2018, 19:30 IST
ದ್ರೌಪದಿ ಪಾತ್ರದಲ್ಲಿ ಜಿ. ವಂದನಾ
ದ್ರೌಪದಿ ಪಾತ್ರದಲ್ಲಿ ಜಿ. ವಂದನಾ   

ಹೊಸಪೇಟೆ: ಹದಿನೈದನೇ ವಯಸ್ಸಿನಲ್ಲಿ ರಂಗಭೂಮಿಗೆ ಪದಾರ್ಪಣೆ ಮಾಡಿ, ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಬಣ್ಣ ಹಚ್ಚಿಕೊಂಡು ಜನರನ್ನು ರಂಜಿಸಿದವರು ಕಲಾವಿದೆ ಜಿ. ವಂದನಾ.

1978ರಲ್ಲಿ ‘ರಕ್ತರಾತ್ರಿ’ ನಾಟಕದಲ್ಲಿ ಉತ್ತರೆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಹೊಸ ಭರವಸೆ ಮೂಡಿಸಿದರು. ನಂತರ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತ ಹೋಯಿತು. ಸಾಲು ಸಾಲಾಗಿ ಬಂದ ಅವಕಾಶಗಳು ಅವರನ್ನು ರಂಗಭೂಮಿಯಲ್ಲಿ ಎತ್ತರಕ್ಕೆ ಬೆಳೆಯುವಂತೆ ಮಾಡಿತು. ‘ರಕ್ತರಾತ್ರಿ’ ನಾಟಕವೊಂದರಲ್ಲೇ ಭಾನುಮತಿ, ದ್ರೌಪದಿ ಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಸಲ ನಟಿಸಿದ್ದು ಅವರ ಹೆಗ್ಗಳಿಕೆ.

ಆರಂಭದಲ್ಲಿ ಕಂಪನಿ ನಾಟಕಗಳಿಗಷ್ಟೇ ಸೀಮಿತವಾಗಿದ್ದ ಅವರು ಹವ್ಯಾಸಿ ರಂಗಭೂಮಿಯ ಕಡೆಗೆ ಹೊರಳಿದರು. ಹವ್ಯಾಸಿ, ಪೌರಾಣಿಕ, ಐತಿಹಾಸಿಕ, ಹಾಸ್ಯ ಪ್ರಧಾನ ಹೀಗೆ ಎಲ್ಲದರಲ್ಲಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿ ಮನೆ ಮಾತಾದರು. ಒಂದೇ ಮಾತಿನಲ್ಲಿ ಹೇಳುವುದಾದರೆ ವಂದನಾ ಅವರು ನಟಿಸಿದ ಪಾತ್ರಗಳೇ ಇಲ್ಲ ಎಂದು ಹೇಳಬಹುದು. ಅವರೇ ಹೇಳಿಕೊಂಡಿರುವಂತೆ ಎರಡು ಸಾವಿರಕ್ಕೂ ಹೆಚ್ಚು ಪ್ರಯೋಗಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ADVERTISEMENT

‘ಮಾತಂಗ ಕನ್ಯಾ’, ‘ಅಣ್ಣ ತಂಗಿ’, ‘ತವರಿನ ತೊಟ್ಟಿಲು’, ‘ಗೌರಿ ಗೆದ್ದಳು’, ‘ಬಸ್‌ ಕಂಡಕ್ಟರ್‌’, ‘ಕೊರವಂಜಿ’, ‘ಕಿತ್ತೂರ ಚನ್ನಮ್ಮ’, ‘ಮಧುಚಂದ್ರ’, ‘ಅತ್ತೆ ಸೊಸೆ’, ‘ಮಲ ಮಗಳು’, ‘ಕುರುಕ್ಷೇತ್ರ’, ‘ಚಿತ್ರಾಂಗದ’, ‘ಅಶ್ವಮೇಧ’, ‘ವೀರ ಅಭಿಮನ್ಯು’, ‘ಅಗ್ನಿ ಕಮಲ’, ‘ಬೆಳ್ಳಿ ಚುಕ್ಕಿ’, ‘ಹೇಮರೆಡ್ಡಿ ಮಲ್ಲಮ್ಮ’, ‘ಭಕ್ತ ಮಾರ್ಕಂಡೇಯ’, ‘ಸಂಪತ್ತಿಗೆ ಸವಾಲ್‌’, ‘ಸತಿಯ ಸೌಭಾಗ್ಯ’, ‘ಜಗಜ್ಯೋತಿ ಬಸವೇಶ್ವರ’, ‘ಪಾಶುಪತಾಸ್ತ್ರ’ ನಾಟಕ ಪ್ರಮುಖವಾದವುಗಳು. ಸ್ತ್ರೀ ಪಾತ್ರಗಳ ಜತೆಗೆ ದುರ್ಯೋಧನ, ಅಶ್ವತ್ಥಾಮ, ಗೌಡನಾಗಿ ನಟಿಸಿ ಪುರುಷ ಪಾತ್ರಗಳಿಗೂ ಜೀವ ತುಂಬಿ ಮೆಚ್ಚುಗೆ ಗಳಿಸಿದರು. ‘ಶಿವಪ್ಪ ನಾಯಕ’ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ಕೂಡ ಅವರಿಗೆ ದೊರೆಯಿತು.

ವಂದನಾ ಅವರ ತಂದೆ ನೀಲಕಂಠಪ್ಪ, ತಾಯಿ ಅಂಜಲಿದೇವಿ, ದೊಡ್ಡಮ್ಮ ಅದೋನಿ ಸುಭದ್ರಮ್ಮ, ತಾತ ತಿಪ್ಪಣ್ಣ ಮೃದಂಗ ಕಲಾವಿದರು. ಅವರಂತೆ ರಂಗಭೂಮಿಯಲ್ಲಿ ಕೆಲಸ ಮಾಡಿ ಹೆಸರು ಮಾಡಬೇಕೆಂಬ ಹಂಬಲ ಬಾಲ್ಯದಲ್ಲೇ ಅವರಲ್ಲಿ ಚಿಗುರೊಡೆಯಿತು. ಆದರೆ, ಪೋಷಕರಿಗೆ ಅದು ಇಷ್ಟವಿರಲಿಲ್ಲ. ಮಗಳು ಓದಿ ಒಳ್ಳೆಯ ಸ್ಥಾನಕ್ಕೆ ಹೋಗಬೇಕೆಂದು ಬಯಸಿದ್ದರು. ಆದರೆ, ಅಂತಿಮವಾಗಿ ಮಗಳ ಹಟಕ್ಕೆ ಮಣಿದು, ಆಕೆಗೆ ಇಷ್ಟವಾದ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿದರು. ಮಗಳು ನಿರೀಕ್ಷೆಗೂ ಮೀರಿ ರಂಗಭೂಮಿಯಲ್ಲಿ ಹೆಸರು ಮಾಡಿದಳು. ವಂದನಾ ಅವರು ಹುಟ್ಟಿದ್ದು ಗದಗ ಜಿಲ್ಲೆಯಲ್ಲಿ, ಬೆಳೆದು ದೊಡ್ಡವರಾಗಿದ್ದು ಗಂಗಾವತಿಯಲ್ಲಿ. ಸದ್ಯ ನಗರದಲ್ಲಿ ನೆಲೆಸಿದ್ದಾರೆ.

ಕಣ್ಣಿನ ಸಮಸ್ಯೆಯಿಂದ 2017ರ ನಂತರ ಅವರು ರಂಗಭೂಮಿ ಮೇಲೆ ಕಾಣಿಸಿಕೊಂಡಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಅಷ್ಟೇ ಅಲ್ಲ, ರಂಗಭೂಮಿಗೆ ಹಿರಿದಾದ ಕೊಡುಗೆ ಕೊಟ್ಟರೂ ತಮ್ಮನ್ನು ಗುರುತಿಸಿಲ್ಲ ಎಂಬ ನೋವು ಅವರಲ್ಲಿದೆ.

ರಂಗಭೂಮಿಯಲ್ಲಿ ನಾನು ಕೆಲಸ ಮಾಡಿದ್ದು ಯಾವುದೋ ಪ್ರಶಸ್ತಿ, ಬಿರುದಿಗಾಗಿ ಅಲ್ಲ. ಆದರೆ, ಕನಿಷ್ಠ ಸೌಜನ್ಯಕ್ಕಾದರೂ ಗುರುತಿಸುವ ಕೆಲಸ ಆಗಿಲ್ಲ. ಇತ್ತೀಚೆಗೆ ರಂಗಭೂಮಿಗೆ ಬಂದವರನ್ನು ಗುರುತಿಸಲಾಗಿದೆ. ಆದರೆ, ಮೂವತ್ತೈದಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದರೂ ನೆನಪಿಗೆ ಬರಲಿಲ್ಲವಲ್ಲ ಎಂಬ ನೋವು ಕಾಡುತ್ತದೆ’ ಎಂದು ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.