ಕುರುಗೋಡು: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮಾಗಿ ಹುಳಿಮೆಯ ನಂತರ ರೈತರು ಪೂರಕವಾಗಿ ಕೊಟ್ಟಿಗೆ ಗೊಬ್ಬರ ಬೆರೆಸಿ ಭೂಮಿಯನ್ನು ಬಿತ್ತನೆಗೆ ಹದ ಮಾಡಿದ್ದರು. ಈಗ ಬಿದ್ದಿರುವ ಮಳೆ, ತೊಗರಿ, ಹತ್ತಿ, ಸಜ್ಜೆ, ನವಣೆ ಮತ್ತು ಸೂರ್ಯಕಾಂತಿ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮನೆಗಳ ಮೂಲೆ ಸೇರಿದ್ದ ಕೃಷಿ ಪರಿಕರಗಳು ಹೊರ ಬಂದಿವೆ. ರೈತರು ಭೂಮಿಯಲ್ಲಿ ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಹದಮಳೆಯಾಗಿರುವುದರಿಂದ ಮಳೆಯಾಶ್ರಿತ ಭೂಮಿಗಳನ್ನು ರೈತರು ಸ್ವಚ್ಛಗೊಳಿಸಿ ಬೀಜ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೀರಾವರಿ ಜಮೀನು ಹೊಂದಿದ ರೈತರು ಭೂಮಿಯಲ್ಲಿ ಬೆಳೆದ ಗಿಡಗಂಟೆಗಳನ್ನು ಸ್ವಚ್ಛಗೊಳಿಸುವ, ಕೊಟ್ಟಿಗೆಗೊಬ್ಬರ ಬೆರಸುವುದು ಸೇರಿದಂತೆ ಪೂರಕ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ರಿಯಾಯಿತಿ ದರದಲ್ಲಿ ಬೀಜ: ತಾಲ್ಲೂಕಿನಲ್ಲಿ 6,800 ಹೆಕ್ಟೇರ್ ಮಳೆಯಾಶ್ರಿತ ಮತ್ತು 22 ಸಾವಿರ ಹೆಕ್ಟೇರ್ ನೀರಾವರಿ ಭೂಮಿ ಇದೆ. 28 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯ ಗುರಿಹೊಂದಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿದೇಶಕ ದಯಾನಂದ್ ತಿಳಿಸಿದರು.
ತಾಲ್ಲೂಕಿನ ಕುರುಗೋಡು ಮತ್ತು ಕೋಳೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಮಾಡಲು ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ ಬೀಜ ದಾಸ್ತಾನು ಲಭ್ಯವಿದೆ. ನೀರಾವರಿ ಭೂಮಿಯಲ್ಲಿ ಬಿತ್ತನೆಗೆ ಆರ್.ಎನ್.ಆರ್ ಮತ್ತು ಸೋನಾಮಸೂರಿ ತಳಿಯ ಭತ್ತದ ಬೀಜ ದಾಸ್ತಾನಿದೆ. ಬಹುತೇಕ ಕೃಷಿ ಪರಿಕರಗಳ ಮಾರಾಟಗಾರರು ಬೀಜ, ಸರಗೊಬ್ಬರ ಮತ್ತು ಕ್ರಿಮಿನಾಶಕ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದಾರೆ. ಈ ವರ್ಷ ರೈತರಿಗೆ ಯಾವುದೇ ಕೊರತೆಯಾಗುವಿದಿಲ್ಲ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ್ ಮಾಹಿತಿ ಹಂಚಿಕೊಂಡರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡ ರೈತರಿಗೆ ಶೇ 75ರಷ್ಟು, ಸಾಮಾನ್ಯ ವರ್ಗದ ರೈತರಿಗೆ ಶೇ 50ರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಮಳೆಯಾಶ್ರಿತ ಕೃಷಿ ಭೂಮಿ : 6,800 ಹೆಕ್ಟೇರ್
ನೀರಾವರಿ ಕೃಷಿ ಭೂಮಿ: 22 ಸಾವಿರ ಹೆಕ್ಟೇರ್
ಒಟ್ಟು ಕೃಷಿ ಭೂಮಿ 28,800 ಹೆಕ್ಟೇರ್
ಮುಂಗಾರು ಬಿತ್ತನೆಯ ಗುರಿ : 28ಸಾವಿರ ಹೆಕ್ಟೇರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.