ADVERTISEMENT

ಲಸಿಕೆ ಉತ್ಸವಕ್ಕೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 12:43 IST
Last Updated 21 ಜೂನ್ 2021, 12:43 IST
ಲಸಿಕೆ ಹಾಕಿಸಿಕೊಳ್ಳಲು ಬಂದ ಜನರಿಗೆ ಹೊಸಪೇಟೆಯ ನೌಕರರ ಭವನದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು
ಲಸಿಕೆ ಹಾಕಿಸಿಕೊಳ್ಳಲು ಬಂದ ಜನರಿಗೆ ಹೊಸಪೇಟೆಯ ನೌಕರರ ಭವನದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು   

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್‌–19 ಲಸಿಕೆ ಉತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಈ ಮೊದಲೇ ನಿಗದಿಪಡಿಸಿದ್ದ ಎಲ್ಲ ಲಸಿಕೆ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಉದ್ದನೆಯ ಸಾಲು ಕಂಡು ಬಂತು. 18 ವರ್ಷ ಮೇಲಿನ ಎಲ್ಲರಿಗೂ ಲಸಿಕೆ ಹಾಕುವುದಾಗಿ ಮೊದಲೇ ಘೋಷಿಸಿದ್ದರಿಂದ ಯುವಕ/ಯುವತಿಯರು, ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರತಿ ಸಾಲಿನಲ್ಲಿ ನಿಂತುಕೊಂಡು ಲಸಿಕೆ ಹಾಕಿಸಿಕೊಂಡರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಶಾಲೆಯಲ್ಲಿ ಬೇಕಾಬಿಟ್ಟಿ ನಿಂತಿದ್ದ ಜನರನ್ನು ತರಾಟೆಗೆ ತೆಗೆದುಕೊಂಡ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಸಾಲಿನಲ್ಲಿ ಶಿಸ್ತಾಗಿ ನಿಂತು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಅವರು ಬಹುತೇಕ ಎಲ್ಲ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಕೊಡುವ ಪ್ರಕ್ರಿಯೆ ಪರಿಶೀಲಿಸಿದರು. ಇನ್ನೊಂದೆಡೆ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌ ಕೂಡ ಕೆಲವು ಕೇಂದ್ರಗಳಿಗೆ ಭೇಟಿ ಕೊಟ್ಟು ವೀಕ್ಷಿಸಿದರು.

ADVERTISEMENT

ನಗರದ ಒಳಾಂಗಣ ಕ್ರೀಡಾಂಗಣ, ಜಂಬುನಾಥ ರಸ್ತೆಯ ಅಂಬೇಡ್ಕರ್‌ ಶಾಲೆ, ರೋಟರಿ ಹಾಲ್‌, ನೆಹರೂ ಕಾಲೊನಿಯ ಪುಣ್ಯಮೂರ್ತಿ ಶಾಲೆ, ಟಿ.ಬಿ. ಡ್ಯಾಂ ಪ್ರಾಥಮಿಕ ಆರೋಗ್ಯ ಕೇಂದ್ರ, ಪಟ್ಟಣ ಪೊಲೀಸ್‌ ಠಾಣೆ, ಸರ್ಕಾರಿ ನೌಕರರ ಭವನ, ಕೆಎಸ್‌ಆರ್‌ಟಿಸಿ ಡಿಪೊ, ಚಿತ್ತವಾಡ್ಗಿಯ ಸರ್ಕಾರಿ ಪ್ರಾಥಮಿಕ ಶಾಲೆ, ವಿನೋಬಾ ಭಾವೆ ಪ್ರೌಢಶಾಲೆ, ತಾಲ್ಲೂಕಿನ ಕಮಲಾಪುರ ವಾಲ್ಮೀಕಿ ಭವನ, ರೈತ ಭವನ, ಮರಿಯಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಯಿತು. ಸಂಜೆ ವರೆಗೂ ಜನದಟ್ಟಣೆ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.