ADVERTISEMENT

ಸರ್ಕಾರಕ್ಕೆ ಪಾರ್ಶ್ವವಾಯು ಹೊಡೆದಿದೆ

ಕಮಲಾಪುರ ಪಟ್ಟಣದಲ್ಲಿ ಶ್ರೀರಾಮುಲು, ದೇವೇಂದ್ರಪ್ಪ ಪ್ರಚಾರ

​ಪ್ರಜಾವಾಣಿ ವಾರ್ತೆ
Published 27 ಮೇ 2019, 12:12 IST
Last Updated 27 ಮೇ 2019, 12:12 IST
ಶಾಸಕ ಬಿ. ಶ್ರೀರಾಮುಲು, ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರು ಸೋಮವಾರ ಕಮಲಾಪುರ ಪಟ್ಟಣದಲ್ಲಿ ಪ್ರಚಾರ ಕೈಗೊಂಡರು–ಪ್ರಜಾವಾಣಿ ಚಿತ್ರ
ಶಾಸಕ ಬಿ. ಶ್ರೀರಾಮುಲು, ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರು ಸೋಮವಾರ ಕಮಲಾಪುರ ಪಟ್ಟಣದಲ್ಲಿ ಪ್ರಚಾರ ಕೈಗೊಂಡರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಸೋಮವಾರ ಪಟ್ಟಣದಲ್ಲಿ ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.

ಪಕ್ಷದ ಅಭ್ಯರ್ಥಿಗಳ ಪರ ಶಾಸಕ ಬಿ. ಶ್ರೀರಾಮುಲು, ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರು ಪ್ರಚಾರ ಕೈಗೊಂಡು, ಮತಯಾಚಿಸಿದರು.

ಪಟ್ಟಣದ ಎಚ್‌.ಪಿ.ಸಿ. ಪ್ರದೇಶದಲ್ಲಿ ಮತದಾರರನ್ನು ಖುದ್ದು ಭೇಟಿ ಮಾಡಿ, ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ADVERTISEMENT

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರಪ್ಪ, ‘ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಪಾರ್ಶ್ವವಾಯು ಹೊಡೆದಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಮೇವಿನ ಸಮಸ್ಯೆ ಎದುರಾಗಿದೆ. ಆಡಳಿತದಲ್ಲಿ ಬಿಗಿ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆ.ಡಿ.ಎಸ್‌. ಎರಡೂ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಈ ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ತುಂಗಭದ್ರಾ ಜಲಾಶಯದಿಂದ ನೀರು ಕೊಟ್ಟು, ಆ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ನೀಗಿಸಲಾಗುವುದು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿದೆ. ನಾನು ಅವರ ಕೋಟೆಯ ಒಬ್ಬ ಸಿಪಾಯಿ. ಅವರ ಹೆಸರಿನಲ್ಲಿ ಗೆದ್ದು ಬಂದವನು’ ಎಂದು ಹೇಳಿದರು.

ಬಿ. ಶ್ರೀರಾಮುಲು ಮಾತನಾಡಿ, ‘ಕುಡಿಯುವ ನೀರು, ಮೇವು ಸಿಗದೆ ಜಿಲ್ಲೆಯ ಜನ ವಲಸೆ ಹೋಗುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಅದನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಪರಸ್ಪರ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಕೂಡಲೇ ಕುರ್ಚಿ ಖಾಲಿ ಮಾಡಿ ಬಿಜೆಪಿಗೆ ಬಿಟ್ಟು ಕೊಡಬೇಕು’ ಎಂದು ಒತ್ತಾಯಿಸಿದರು.

‘ನಾನು ಸಂಸದನಾಗಿದ್ದಾಗ ಹಂಪಿಯ ರಥಬೀದಿ, ಬಿಷ್ಟಪ್ಪಯ್ಯ ಗೋಪುರ ಅಭಿವೃದ್ಧಿ ಪಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈಗ ಪುನಃ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದವರೇ ಆದ ದೇವೇಂದ್ರಪ್ಪನವರು ಸಂಸದರಾಗಿರುವುದರಿಂದ ಕಾಶಿ ಮಾದರಿಯಲ್ಲಿ ಹಂಪಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ವಿಶೇಷ ಪ್ಯಾಕೇಜ್‌ ಕೊಟ್ಟು ಆದ್ಯತೆ ಮೇರೆಗೆ ಅಭಿವೃದ್ಧಿಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಕವಿರಾಜ ಅರಸ್‌, ರಾಣಿ ಸಂಯುಕ್ತಾ, ಅನಂತ ಪದ್ಮನಾಭ, ಬಸವರಾಜ ನಾಲತ್ವಾಡ, ಗುದ್ಲಿ ಪರಶುರಾಮ, ಗೋಸಲ ಭರಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.