ಬಳ್ಳಾರಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿ ದರ ಇಳಿಸುವ ಮೂಲಕ ಎಲ್ಲ ವರ್ಗದ ಜನರಿಗೆ ಕೊಡುಗೆ ನೀಡಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯಾಲಯದಲ್ಲಿ ಗುರುವಾರ ನಡೆದ ‘ಜಿಎಸ್‌ಟಿ ಇಳಿಕೆ’ ಚರ್ಚೆಯಲ್ಲಿ ಅವರು ಮಾತನಾಡಿದರು.
‘ಸುಮಾರು 60 ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಲಾಗಿದ್ದು, ತಿಂಗಳಿಗೆ ₹5 ಸಾವಿರದಿಂದ 20 ಸಾವಿರವರೆಗೆ ಉಳಿತಾಯ ಆಗಲಿದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲ ಆಗಲಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಮಲ್ಲೇಶ್ ಕುಮಾರ್, ಮಾಜಿ ಶಾಸಕ ಸೋಮಶೇಖರರೆಡ್ಡಿ, ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಬಿ.ಮಹಾರುದ್ರಗೌಡ ಇದ್ದರು.
ಸಿದ್ದರಾಮಯ್ಯ ವಿರುದ್ಧ ಟೀಕೆ:
ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಹೈಕಮಾಂಡ್ ಕೆಳಗಿಳಿಸುವ ಭಯದಿಂದ ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 2013ರಲ್ಲಿ ಅಧಿಕಾರ ವಹಿಸಿಕೊಂಡಾಗ ಇದು ತಮ್ಮ ಕೊನೆ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಬಳಿಕ ಮಾತು ತಪ್ಪಿದರು. ಮನುಷ್ಯನಿಗೆ ಒಂದೇ ನಾಲಿಗೆ ಇರಬೇಕು’ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಸಂತ್ರಸ್ತರಿಗೆ ಪರಿಹಾರ ನೀಡದೆ ಕೇಂದ್ರ ಸರ್ಕಾರದತ್ತ ಸಿದ್ದರಾಮಯ್ಯ ಅವರು ಬೊಟ್ಟು ಮಾಡುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಬಂದೇ ಬರುತ್ತದೆ. ಆದರೆ, ನೀವು (ಸಿದ್ದರಾಮಯ್ಯ) ನಾಟಕ ಬದಲು ಜನರಿಗೆ ಪರಿಹಾರ ನೀಡಿ’ ಎಂದರು.
ವೈಮಾನಿಕ ಸಮೀಕ್ಷೆ: ಟೀಕೆ
‘ಸಂಕಷ್ಟ ಬಂದಾಗ ತಪ್ಪಿಸಿಕೊಳ್ಳುವ ಕಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರೆ ಜನರು ಅವರ ಮೇಲೆ ಮುಗಿಬೀಳುತ್ತಿದ್ದರು. ಅಲ್ಲದೆ ಇಲ್ಲಿನ ಹದಗೆಟ್ಟ ರಸ್ತೆಗಳಲ್ಲಿ ಅವರು ಕಾರಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.