ADVERTISEMENT

ಪ್ರವಾಸಿ ತಾಣವಾಗಲಿದೆ ಗುಂಡಾ ಉದ್ಯಾನ

ತುಂಗಭದ್ರಾ ಹಿನ್ನೀರಿನಲ್ಲಿ ಬೋಟಿಂಗ್‌ ಆರಂಭಿಸಲು ಅರಣ್ಯ ಇಲಾಖೆ ಚಿಂತನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ಸೆಪ್ಟೆಂಬರ್ 2020, 8:08 IST
Last Updated 10 ಸೆಪ್ಟೆಂಬರ್ 2020, 8:08 IST
ಹೊಸಪೇಟೆಯ ಗುಂಡಾ ಸಸ್ಯ ಉದ್ಯಾನ
ಹೊಸಪೇಟೆಯ ಗುಂಡಾ ಸಸ್ಯ ಉದ್ಯಾನ   

ಹೊಸಪೇಟೆ: ನಗರ ಹೊರವಲಯದ ತುಂಗಭದ್ರಾ ಹಿನ್ನೀರಿಗೆ ಹೊಂದಿಕೊಂಡಿರುವ ಗುಂಡಾ ಸಸ್ಯ ಉದ್ಯಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

ತುಂಗಭದ್ರಾ ಜಲಾಶಯದ ಮಗ್ಗುಲಲ್ಲೇ ಇರುವ ‘ಲೇಕ್‌ ವ್ಯೂವ್‌’ಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಆ ಜಾಗಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ಕೊಡುತ್ತಿದ್ದರು. ಈಗ ಆ ಪ್ರವಾಸಿಗರನ್ನು ಗುಂಡಾ ಉದ್ಯಾನದತ್ತ ಆಕರ್ಷಿಸಿ, ಆದಾಯ ಹೆಚ್ಚಿಸಿಕೊಳ್ಳುವುದು ಅರಣ್ಯ ಇಲಾಖೆಯ ಉದ್ದೇಶವಾಗಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಬೇಕಾದ ಕೆಲಸಗಳು ಈಗಾಗಲೇ ಭರದಿಂದ ನಡೆಯುತ್ತಿವೆ. ಉದ್ಯಾನದೊಳಗೆ ಈ ಹಿಂದೆ ಇದ್ದ ಹಾಸುಗಲ್ಲುಗಳನ್ನು ತೆಗೆದು, ಸುತ್ತಲೂ ಓಡಾಡಲುಪಥ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಜೋಕಾಲಿ, ಜಾರುಬಂಡೆ ಸೇರಿದಂತೆ ಇತರೆ ಆಟೋಟಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕುಳಿತುಕೊಳ್ಳಲು ಹಿನ್ನೀರಿನ ಸಮೀಪ ಸಿಮೆಂಟ್‌ ಆಸನಗಳನ್ನು ಅಳವಡಿಸಲಾಗಿದೆ. ಊಟಕ್ಕೆ ಕೂರಲು ನಾಲ್ಕು ಪ್ಯಾರಾಗೋಲ ನಿರ್ಮಿಸಲಾಗಿದೆ.

ADVERTISEMENT

ತಾಲ್ಲೂಕಿನ ಕಲ್ಲಹಳ್ಳಿ–ರಾಜಪುರ ಗ್ರಾಮ ಪಂಚಾಯಿತಿ ನೆರವಿನೊಂದಿಗೆ ‘ಅಕ್ವೇರಿಯಂ’ ನಿರ್ಮಿಸಲಾಗುತ್ತಿದ್ದು, ಇಷ್ಟರಲ್ಲೇ ಕೆಲಸ ಪೂರ್ಣಗೊಳ್ಳಲಿದೆ. ಹಿನ್ನೀರಿನಲ್ಲಿ ಬೋಟಿಂಗ್‌ ಆರಂಭಿಸಲು ಮುಂದಾಗಿದ್ದು, ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಕೂಡ ಸಲ್ಲಿಸಲಾಗಿದೆ.

‘ಇದೇ ಕ್ಷೇತ್ರದ ಶಾಸಕರಾಗಿರುವ ಆನಂದ್‌ ಸಿಂಗ್‌ ಅವರು ಅರಣ್ಯ ಸಚಿವರಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಉದ್ಯಾನಕ್ಕೆ ಆಹ್ವಾನಿಸಿ, ಅವರೊಂದಿಗೆ ಪರಾಮರ್ಶಿಸಿದ ನಂತರ ಇನ್ನಷ್ಟು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ವಿನಯ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರವಾಸಿಗರ ದಾಂಗುಡಿ:

ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿದ್ದು, ಗುಂಡಾ ಉದ್ಯಾನಕ್ಕೆ ಹಿನ್ನೀರಿನಿಂದ ವಿಶೇಷ ಕಳೆ ಬಂದಿದೆ. ಸುತ್ತಮುತ್ತಲಿನ ಬೆಟ್ಟ ಗುಡ್ಡಗಳು ಹಸಿರು ಹೊದ್ದುಕೊಂಡಿವೆ. ಈ ದೃಶ್ಯ ಕಣ್ತುಂಬಿಕೊಳ್ಳಲು ನಿತ್ಯ ಪ್ರವಾಸಿಗರ ದಂಡು ಉದ್ಯಾನಕ್ಕೆ ಬರುತ್ತಿದೆ.

ಕೊರೊನಾ ಕಾರಣಕ್ಕಾಗಿನಾಲ್ಕೂವರೆ ತಿಂಗಳು ಉದ್ಯಾನದ ಬಾಗಿಲು ಮುಚ್ಚಿತ್ತು. ಇದೇ ಸಮಯದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ. ಆ. 17ರಿಂದ ಸಾರ್ವಜನಿಕ ಭೇಟಿಗೆ ಉದ್ಯಾನ ಮುಕ್ತಗೊಳಿಸಲಾಗಿದ್ದು, ನಿತ್ಯವೂ ಜನಜಾತ್ರೆ ಕಂಡು ಬರುತ್ತಿದೆ.

‘ಉದ್ಯಾನ ಮುಚ್ಚಿದ್ದಾಗ ಸಹ ಅನೇಕ ಜನ ಹೊರಗಿನಿಂದಲೇ ನೋಡಿಕೊಂಡು ಹೋಗುತ್ತಿದ್ದರು. ಈಗ ಬಾಗಿಲು ತೆಗೆದಿರುವ ವಿಷಯ ಗೊತ್ತಾಗಿ ನಿತ್ಯ 300ರಿಂದ 400 ಜನ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ’ ಎಂದು ವಿನಯ್‌ ತಿಳಿಸಿದ್ದಾರೆ.

ಗುಂಡಾ ಸಸ್ಯ ಉದ್ಯಾನವು ಭೌಗೋಳಿಕವಾಗಿ ಉತ್ತಮ ಜಾಗದಲ್ಲಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಎಲ್ಲ ಅನುಕೂಲಗಳಿವೆ
-ವಿನಯ್‌, ವಲಯ ಅರಣ್ಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.