ತೆಕ್ಕಲಕೋಟೆ ಸಮೀಪದ ಬುದುಗುಪ್ಪ ಗ್ರಾಮದ ಗುಂಡಿನ ಮಲ್ಲೇಶ್ವರ ಸ್ವಾಮಿಯ ಜಾತ್ರೆ ಅಂಗವಾಗಿ ಗೊರವಯ್ಯ ಮಲ್ಲಯ್ಯ ಕಾರ್ಣಿಕ ನುಡಿದರು
ತೆಕ್ಕಲಕೋಟೆ: ‘ಮಳೆ ಅಂದ, ಬೆಳೆ ಚಂದ, ನಾಡೆಲ್ಲಾ ಚಂದಾಯಿತಲೇ ಪರಾಕ್’..
ತೆಕ್ಕಲಕೋಟೆ ಸಮೀಪದ ಬೂದುಗುಪ್ಪ ಗ್ರಾಮದ ಗುಂಡಿನ ಮಲ್ಲೇಶ್ವರ ಸ್ವಾಮಿಯ 16ನೇ ವರ್ಷದ ಜಾತ್ರೆ ಅಂಗವಾಗಿ ನುಡಿದ ಕಾರ್ಣಿಕ ಇದು.
ಮಂಗಳವಾರ ಸಂಜೆ ಎದುರು ಬಸವಣ್ಣ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಹಾಗೂ ಕಾರ್ಣಿಕದ ಬಿಲ್ಲನ್ನು ಮೆರವಣಿಗೆ ಮೂಲಕ ತರಲಾಯಿತು.
ಗೊರವಯ್ಯ ಮಲ್ಲಯ್ಯ 20 ಅಡಿ ಎತ್ತರದ ಬಿಲ್ಲನ್ನು ಏರಿ ಮೂರು ಬಾರಿ ‘ಸದ್ದಲೇ ಸದ್ದು’ ಎಂದಾಗ ನೆರೆದಿದ್ದ ಸಾವಿರಾರು ಜನ ಭಕ್ತರು ಮೌನಕ್ಕೆ ಶರಣಾಗಿದ್ದರು. ನಂತರ ಕಾರ್ಣಿಕ ನುಡಿದಾಗ ನೆರೆದಿದ್ದವರೆಲ್ಲ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ’ಈ ಸಲ ಉತ್ತಮ ಮಳೆಯಾಗಲಿದ್ದು, ಸಮೃದ್ಧ ಬೆಳೆ ಬರಲಿದೆ, ನಾಡು ಸಮೃದ್ಧವಾಗಲಿದೆ’ ಎಂದು ಭಕ್ತರು ಕಾರ್ಣಿಕ ವಿಶ್ಲೇಷಿಸಿದರು.
ಸರಪಳಿ ಪವಾಡ: ಸೋಮವಾರ ಸಂಜೆ ನಡೆದ ಸರಪಳಿ ಪವಾಡದ ಅಂಗವಾಗಿ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಸಲಾಯಿತು. ನಂತರ ಬೂದುಗುಪ್ಪ ಗ್ರಾಮದ ರಾಘವೇಂದ್ರ ರೆಡ್ಡಿ, ತೆಕ್ಕಲಕೋಟೆಯ ಲಿಂಗನಗೌಡ ಸರಪಳಿ ಹರಿದರು. ಸಾವಿರಾರು ಭಕ್ತರು ಸರಪಳಿ ಪವಾಡಕ್ಕೆ ಸಾಕ್ಷಿಯಾದರು. ‘ಚಾಂಗ್ ಭಲೋ, ಚಾಂಗ್ ಭಲೋ ಮಲ್ಲಯ್ಯ’ ಎಂದು ಘೋಷಣೆ ಕೂಗಿದರು.
ತೆಕ್ಕಲಕೋಟೆ, ಬಲಕುಂದಿ, ಮೈಲಾಪುರ ಮತ್ತು ಬೂದುಗುಪ್ಪ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.