ADVERTISEMENT

ಕ್ಷೌರಿಕ ವೃತ್ತಿ ಬಹಳ ಶ್ರೇಷ್ಠವಾದುದು

ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ನವದೆಹಲಿಯ ಮಹಾಂತ ದೇವರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 10:35 IST
Last Updated 16 ಜುಲೈ 2019, 10:35 IST
ಕಾರ್ಯಕ್ರಮದಲ್ಲಿ ಮಹಾಂತ ದೇವರು ಹಾಗೂ ಗಣ್ಯರು ಬಸವಣ್ಣನ ಪುತ್ಥಳಿ, ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಗೌರವ ಸಮರ್ಪಿಸಿದರು
ಕಾರ್ಯಕ್ರಮದಲ್ಲಿ ಮಹಾಂತ ದೇವರು ಹಾಗೂ ಗಣ್ಯರು ಬಸವಣ್ಣನ ಪುತ್ಥಳಿ, ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಗೌರವ ಸಮರ್ಪಿಸಿದರು   

ಹೊಸಪೇಟೆ: ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಮಂಗಳವಾರ ನಗರದಲ್ಲಿ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಬಸವೇಶ್ವರ ಬಡಾವಣೆಯ ಬಸವ ಉದ್ಯಾನದಲ್ಲಿ ಬಸವಣ್ಣ ಹಾಗೂ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಕಾಲೇಜು ರಸ್ತೆ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬಸ್‌ ನಿಲ್ದಾಣ, ಪುಣ್ಯಮೂರ್ತಿ ವೃತ್ತದ ಮೂಲಕ ಹಾದು ನಗರಸಭೆ ಕಚೇರಿ ಆವರಣದಲ್ಲಿ ಮೆರವಣಿಗೆ ಕೊನೆಗೊಂಡಿತು.

ಮೆರವಣಿಗೆಯುದ್ದಕ್ಕೂ ಷಟಸ್ಥಲ ಚಿಹ್ನೆ ಹೊಂದಿರುವ ಶ್ವೇತ ವರ್ಣದ ಧ್ವಜಗಳು ರಾರಾಜಿಸಿದವು. ಬಸವಣ್ಣನವರಿಗೆ ಜಯವಾಗಲಿ, ಹಡಪದ ಅಪ್ಪಣ್ಣನವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು.

ADVERTISEMENT

ಬಳಿಕ ನಡೆದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ನವದೆಹಲಿ ತೋಂಟದಾರ್ಯ ಮಹಾತ್ಮ ಬಸವಾಶ್ರಮ ಶಾಖಾಮಠದ ಮಹಾಂತ ದೇವರು, ‘ಹಡಪದ ಸಮಾಜ ಬಹಳ ಚಿಕ್ಕ ಸಮಾಜ. ಅನೇಕ ಸರ್ಕಾರಿ ಸವಲತ್ತುಗಳಿಂದ ಸಮಾಜ ವಂಚಿತವಾಗಿದೆ. ಸಮಾಜದಲ್ಲಿ ಒಗ್ಗಟ್ಟು ಇಲ್ಲದಿರುವುದೇ ಅದಕ್ಕೆ ಪ್ರಮುಖ ಕಾರಣ. ಅಷ್ಟೇ ಅಲ್ಲ, ಅಪ್ಪಣ್ಣನವರ ಆಚಾರ–ವಿಚಾರಗಳನ್ನು ಸಮಾಜದವರು ಪಾಲಿಸುತ್ತಿಲ್ಲ. ಅಪ್ಪಣ್ಣ ಹಾಗೂ ಅವರ ಮಡದಿ ಅಂಗದ ಮೇಲೆ ಲಿಂಗ, ಹಣೆ ಮೇಲೆ ವಿಭೂತಿ ಧರಿಸಿ ಬಸವಣ್ಣನ ದಾರಿಯಲ್ಲಿ ಮುನ್ನಡೆಯುತ್ತಿದ್ದರು. ಆದರೆ, ಸಮಾಜದವರಲ್ಲಿ ಅದ್ಯಾವುದು ಕಾಣಿಸುತ್ತಿಲ್ಲ’ ಎಂದು ಹೇಳಿದರು.

‘ಹಡಪದ ಸಮಾಜದವರಿಗೆ ಅಪ್ಪಣ್ಣನವರ ಸಿದ್ಧಾಂತ ಬೇಕಿಲ್ಲ. ಕೇವಲ ಅವರ ಹೆಸರಷ್ಟೇ ಬೇಕಿದೆ. ವರ್ಷಕ್ಕೆ ಒಮ್ಮೆ ಅಪ್ಪಣ್ಣನವರ ಜಯಂತಿ ಮಾಡುವುದಕ್ಕಷ್ಟೇ ಸೀಮಿತವಾಗಿದೆ. ಹೀಗೆ ಮಾಡಿದರೆ ಸಮಾಜ ಸಂಘಟಿತವಾಗಲು ಸಾಧ್ಯವಿಲ್ಲ. ಸಮಾಜ ಸಂಘಟಿತರಾಗುವವರೆಗೆ ಒಡೆದು ಆಳುವವರು ಇದ್ದೇ ಇರುತ್ತಾರೆ’ ಎಂದು ಎಚ್ಚರಿಸಿದರು.

‘ಅಡಪದ ಎಂಬ ಶಬ್ದ ಹೋಗಿ ಹಡಪದ ಆಗಿದೆ. ಅಡಪದ ಎಂದರೆ ಕ್ಷೌರಿಕ ವೃತ್ತಿ ಮಾಡುವವರು ಎಲ್ಲ ಪರಿಕರಗಳನ್ನು ಒಂದೇ ಸಾಧನದಲ್ಲಿ ಇಟ್ಟುಕೊಳ್ಳುವ ವಸ್ತುವಿಗೆ ಕರೆಯುತ್ತಾರೆ. ಕ್ಷೌರಿಕ ವೃತ್ತಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ವೃತ್ತಿಗೆ ಅನ್ಯ ಸಮಾಜದವರು ಪದಾರ್ಪಣೆ ಮಾಡಿದ್ದಾರೆ. ಬ್ಯೂಟಿ ಪಾರ್ಲರ್‌, ಮೇಕಪ್‌ ಹೆಸರಿನಲ್ಲಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಆದರೆ, ಹಡಪದ ಸಮಾಜಕ್ಕೆ ಈ ವೃತ್ತಿಯ ಬಗ್ಗೆ ಸಂಕೋಚವಿದ್ದಂತೆ ಇದೆ. ಕೀಳು ಮನೋಭಾವ ಬಿಡಬೇಕು. ನಾನು ಹಡಪದ ಎಂದು ಹೆಮ್ಮೆ, ಗೌರವ ಮತ್ತು ಅಭಿಮಾನದಿಂದ ಹೇಳಿಕೊಳ್ಳಬೇಕು. ಹಡಪದರು ಹಣಕ್ಕಾಗಿ ಯಾರಿಗೂ ಕೈ ಚಾಚುವುದಿಲ್ಲ. ಶ್ರದ್ಧೆ, ನಿಷ್ಠೆಯಿಂದ ಕಾಯಕ ಮಾಡಿ ಬದುಕುವವರು’ ಎಂದು ಹೇಳಿದರು.

ತಾಲ್ಲೂಕು ಲಿಂಗಾಯತ ಹಡಪದ ಅಪ್ಪಣ್ಣ ಸಮಾಜದ ಗೌರವ ಅಧ್ಯಕ್ಷ ಹಡಪದ ಶೇಖರಪ್ಪ, ಅಧ್ಯಕ್ಷ ಹಡಪದ ಬಸವರಾಜ, ಕಾರ್ಯದರ್ಶಿ ಹಡಪದ ಜೈಪ್ರಕಾಶ, ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಶರಣು ಸ್ವಾಮಿ, ಕಾರ್ಯದರ್ಶಿ ಕೆ. ರವಿಶಂಕರ, ಅಕ್ಕನ ಬಳಗದ ಅಧ್ಯಕ್ಷ ಅರುಣಾ ಶಿವಾನಂದ, ಬಸವ ಬಳಗದ ಅಧ್ಯಕ್ಷ ಬಸವಕಿರಣ ಸ್ವಾಮಿ, ಉಪಾಧ್ಯಕ್ಷ ಮಧುರಚೆನ್ನ ಶಾಸ್ತ್ರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಎಚ್‌. ಬಸವರಾಜ, ವಚನ ಬಳಗದ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ,ಆರ್ಥಿಕ ತಜ್ಞ ಟಿ.ಆರ್‌. ಚಂದ್ರಶೇಖರ್‌, ತಾಂಡೂರು ಸುವರ್ಣಮ್ಮ ಟ್ರಸ್ಟ್‌ನ ಡಾ.ಟಿ. ಅಮರೇಶ್ವರ, ಯುವ ಮುಖಂಡ ಸಂದೀಪ್‌ ಸಿಂಗ್‌, ಮುಖಂಡ ಅಮಾಜಿ ಹೇಮಣ್ಣ, ತಹಶೀಲ್ದಾರ್ ಎಚ್‌. ವಿಶ್ವನಾಥ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಬಸವರಾಜ ಜತ್ತಿ ಇದ್ದರು.

ಅಂಜಲಿ ಭರತನಾಟ್ಯ ಕಲಾ ಸಂಸ್ಥೆಯ ಕಲಾವಿದರು ವಚನ ನೃತ್ಯ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.