ಹಗರಿಬೊಮ್ಮನಹಳ್ಳಿ: ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಧ್ಯೆಯ ಶ್ರೀರಾಮ ಮಂದಿರದ ಮಾದರಿ ಭಕ್ತರ ಗಮನ ಸೆಳೆಯುತ್ತಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಯ ಹವ್ಯಾಸಿ ಕಲಾವಿದ, ಶಿಕ್ಷಕ ವಿನಯರಾಮ ಅವರು ಈ ಮಾದರಿಯನ್ನು ರೂಪಿಸಿದ್ದಾರೆ. ಅಧ್ಯಾತ್ಮವನ್ನು ಎಲ್ಲ ಕಡೆಗಳಲ್ಲೂ ಪಸರಿಸುವುದಕ್ಕಾಗಿ ರಾಜ್ಯಪ್ರವಾಸ ಕೈಗೊಂಡಿರುವ ಅವರು ಪಟ್ಟಣದಲ್ಲಿ ನಡೆಸುತ್ತಿರುವ ಪ್ರದರ್ಶನ 89ನೆಯದ್ದಾಗಿದೆ. ಸೆ. 2ರವರೆಗೆ ಪ್ರದರ್ಶನ ಇರಲಿದೆ.
ಅಯೋಧ್ಯೆಯನ್ನು ಇದುವರೆಗೂ ನೋಡದ ಇವರು ಅದರ ನೀಲನಕ್ಷೆಯಿಂದಲೇ ಅರಮನೆ ಶೈಲಿಯ ರಾಮಮಂದಿರದ ಪ್ರತಿಕೃತಿಯನ್ನು ವ್ಯತ್ಯಾಸವಿಲ್ಲದೆ ನಿರ್ಮಿಸಿದ್ದಾರೆ. ಅಯೋಧ್ಯೆಯ ಮಂದಿರದಂತೆಯೇ ಮೂರು ಮಹಡಿಗಳನ್ನು ರಚಿಸಿದ್ದು ನೆಲ ಮಹಡಿಯಲ್ಲಿ ಬಾಲರಾಮನ ಮೂರ್ತಿ, ಆರಂಭದಲ್ಲಿ ರಾಮ ಸೀತೆ, ಭರತ, ಲಕ್ಷ್ಮಣ ಮತ್ತು ಆಂಜನೇಯನ ಚಿಕ್ಕ ಮೂರ್ತಿಗಳನ್ನು ಅಳವಡಿಸಿದ್ದಾರೆ. ದರ್ಬಾರ್ ಹಾಲ್ ಕೂಡ ಇದೆ. ಎಲ್ಲರನ್ನೂ ಕೈಬೀಸಿ ಕರೆಯುತ್ತಿರುವ ಆಕರ್ಷಕ ಮಂದಿರ ಮತ್ತು ಮೂರ್ತಿಯನ್ನು ವೀಕ್ಷಿಸಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.
ಥರ್ಮಾಕೋಲ್, ಅಕ್ರಲಿಕ್ ಕಲರ್, ಫೆವಿಕಾಲ್, ಮರದ ಪೌಡರ್, ಟೂತ್‍ಪೊಕ್ ಸೇರಿದಂತೆ ವಿವಿಧ ಸಾಮಗ್ರಿ ಬಳಸಿ ನಿರ್ಮಿಸಿದ ಮಂದಿರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.