ADVERTISEMENT

ಹಗರಿಬೊಮ್ಮನಹಳ್ಳಿ | 'ದೇವದಾಸಿಯರ ಆನ್‌ಲೈನ್ ಸಮೀಕ್ಷೆ ಅಸಮರ್ಪಕ'

ಸಿಡಿಪಿಒ ಕಚೇರಿ‌ ಮುಂದೆ ಧರಣಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:43 IST
Last Updated 22 ಅಕ್ಟೋಬರ್ 2025, 7:43 IST
ಹಗರಿಬೊಮ್ಮನಹಳ್ಳಿಯಲ್ಲಿ ದೇವದಾಸಿ ವಿಮೋಚನಾ ಸಂಘದ ಪದಾಧಿಕಾರಿಗಳು ಸಿಡಿಪಿಒ ಬೋರೆಗೌಡರಿಗೆ ಮನವಿ ಸಲ್ಲಿಸಿದರು
ಹಗರಿಬೊಮ್ಮನಹಳ್ಳಿಯಲ್ಲಿ ದೇವದಾಸಿ ವಿಮೋಚನಾ ಸಂಘದ ಪದಾಧಿಕಾರಿಗಳು ಸಿಡಿಪಿಒ ಬೋರೆಗೌಡರಿಗೆ ಮನವಿ ಸಲ್ಲಿಸಿದರು   

ಹಗರಿಬೊಮ್ಮನಹಳ್ಳಿ: ದೇವದಾಸಿ ಮಹಿಳೆಯರ ಕುಟುಂಬಗಳ ಆನ್ ಲೈನ್ ಸಮೀಕ್ಷೆ ಅಸಮರ್ಪಕವಾಗಿದೆ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ‌ ಹೇಳಿದರು.

ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಬಳಿ ಕಳೆದ ಒಂದು ವಾರದಿಂದ ಹಮ್ಮಿಕೊಂಡಿದ್ದ ಧರಣಿಯ ನೇತೃತ್ವ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ನಿರ್ಧಾರ ದೇವದಾಸಿ ಮಹಿಳಾ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗಿದೆ, ಸರ್ಕಾರ 1982ರಲ್ಲಿ ಜನಿಸಿದ ಮಹಿಳೆಯರ ಸಮೀಕ್ಷೆ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ಈ ಆದೇಶದಿಂದ ಇತರೆ ಬಹುಸಂಖ್ಯೆಯಲ್ಲಿರುವ ದೇವದಾಸಿ ಮಹಿಳೆಯರು ಸೌಲಭ್ಯಗಳಿಂದ ವಂಚಿರಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುಟುಂಬಗಳಲ್ಲಿನ‌ ಮಕ್ಕಳು ಮುಂದಿನ ದಿನಗಳಲ್ಲಿ ಅನಿಷ್ಟ ಪದ್ಧತಿಯಿಂದ ಹೊರಬರಲಿದ್ದಾರೆ ಎಂದು ತಿಳಿಸಿದರು. ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ADVERTISEMENT

ಬೇಡಿಕೆ ಈಡೇರದಿದ್ದರೆ ರಾಜ್ಯದಾದ್ಯಂತ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ಮೈಲಮ್ಮ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಮಾಹಿತಿ ಸಂಗ್ರಹಿಸಿ, ಆನ್‍ಲೈನ್ ಸಮೀಕ್ಷೆಗೆ ಕ್ರಮ ವಹಿಸಬೇಕು. ವಯೋಮಿತಿ ಮತ್ತು ಕಾಯ್ದೆಗಳ ಮೂಲಕ‌ ಯಾರನ್ನೂ ಆತಂಕಗೊಳಿಸಬಾರದು. ಎಲ್ಲ ದೇವದಾಸಿಯರು ಮತ್ತು ಅವರ ಕುಟುಂಬದ ಮೂರು ತಲೆಮಾರಿಗೂ ಅನ್ವಯಿಸುವಂತೆ ಗಣತಿಗೆ ಕ್ರಮ ವಹಿಸಬೇಕು. ಸಮೀಕ್ಷೆಯ ಬಳಿಕ ಈ ಎಲ್ಲ ಕುಟುಂಬಗಳು ಸ್ವಾವಲಂಬಿ ಬದುಕು ಕಂಡುಕೊಳ್ಳಲು ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಿಡಿಪಿಒ ಬೋರೇಗೌಡರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಪಿ.ಚಾಂದ್ ಬೀ, ಕೆ.ಅಂಜಿನಮ್ಮ, ಎಂ.ತಟ್ನೆಮ್ಮ, ಕೆ.ದೊಡ್ಡಬಸಮ್ಮ, ಎಚ್.ಬಸಮ್ಮ, ಎಚ್.ದುರುಗಮ್ಮ, ಎಚ್.ನಿಂಗಮ್ಮ, ಎಚ್.ನೀಲಮ್ಮ, ತಿಮ್ಮಕ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.