
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಶ್ರೀವೆಂಕಟೇಶ್ವರನ 69ನೇ ವರ್ಷದ ರಥೋತ್ಸವ ಶುಕ್ರವಾರ ವಸಂತ ಪಂಚಮಿಯಂದು ವಿಜೃಂಭಣೆಯಿಂದ ಜರುಗಿತು.
ಸಿದ್ಧಗೊಂಡ ರಥದ ಮುಂಭಾಗದಲ್ಲಿ ಹೋಮ, ಹವನ ಪೂರ್ಣಾಹುತಿ ನಡೆಯಿತು. ಬಳಿಕ ಮಡಿತೇರು, ಬ್ರಹ್ಮೋತ್ಸವದಲ್ಲಿ ನೂರಾರಯ ಭಕ್ತರು ಭಾಗವಹಿಸಿದ್ದರು. ಶ್ರೀವೆಂಕಟೇಶ್ವರ ಮತ್ತು ಸತ್ಯನಾರಾಯಣ ದೇವಸ್ಥಾನದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಸಂಜೆ ರಥಬೀದಿಯಲ್ಲಿ ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ರಥದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಪ್ರತಿಷ್ಠಾಪಿಸಲಾಯಿತು, ರಥ ಮುಂದಕ್ಕೆ ಚಲಿಸುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತರ ಗೊಂವಿಂದ ಗೋವಿಂದ ಎನ್ನುವ ಜಯಘೋಷ ಮುಗಿಲು ಮುಟ್ಟಿತ್ತು, ರಥ ಎಳೆಯುತ್ತಾ ವೆಂಕಟೇಶ್ವರರ ನಾಮಾವಳಿಗಳನ್ನು ಜಪಿಸಿದರು. ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿದ್ದರು. ರಥ ಪಾದಗಟ್ಟೆಯ ವರೆಗೂ ತಲುಪಿ ಮತ್ತೆ ಮೂಲ ಸ್ಥಾನಕ್ಕೆ ಬರುವ ವರೆಗೂ ಜನಸಂದಣಿ ಇತ್ತು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು, ಗಾಲಿಗಳಿಗೆ ಈಡುಗಾಯಿ ಹೊಡೆದು ಹರಕೆ ತೀರಿಸಿದರು.
ಶಾಸಕ ಕೆ.ನೇಮರಾಜನಾಯ್ಕ, ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಟಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಗಂಗಾಧರ, ಧರ್ಮಕರ್ತ ಗಂಗಾವತಿ ವಿಜಯಕುಮಾರ್, ಗಂಗಾವತಿ ವಿಜೇತ ರಥೋತ್ಸವದಲ್ಲಿ ಭಾಗವಹಿಸಿದ್ದರು.
ಉಚಿತ ಹೋಳಿಗೆ ಊಟ: ವೆಂಕಟೇಶ್ವರ ರಥೋತ್ಸವ ಅಂಗವಾಗಿ ಪಟ್ಟಣದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ.ಗಂಗಾಧರ ಅವರು ಸಾವಿರಾರು ಜನರಿಗೆ ಹೋಳಿಗೆ ಊಟ ಉಚಿತವಾಗಿ ವಿತರಿಸಿದರು.
ಶುಕ್ರವಾರ ಮಧ್ಯಾಹ್ನದಿಂದಲೇ ಸಾರ್ವಜನಿಕರಿಗೆ ಹೋಳಿಗೆ, ಕೋಸಂಬ್ರಿ, ಪಲ್ಯೆ, ಹಪ್ಪಳ, ಪಲಾವ್, ಅನ್ನ ಸಾಂಬಾರ್ ವಿತರಿಸುವ ಮೂಲಕ ಭಕ್ತಿಭಾವ ಮೆರೆದರು. ಸತತ 15ನೇ ಬಾರಿಗೆ ಊಟ ವಿತರಿಸಿದ್ದಾರೆ.
ನಂದಿಪುರದ ಮಹೇಶ್ವರ ಸ್ವಾಮೀಜಿ ಚಾಲನೆ ನೀಡಿದರು, ಸಿ.ಎಂ.ಶ್ರೀನಿವಾಸ, ಸಂಚಿ ಶಿವಕುಮಾರ್, ಸರ್ದಾರ ಯಮನೂರ್, ಎಂ.ಅಶೋಕ್, ಅಂಜಿನಿ, ಯಲ್ಲಪ್ಪ, ಅಟೊ ವೀರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.