ADVERTISEMENT

ವಿಜಯನಗರ: ಪೊದೆಗಳಲ್ಲಿ ಮುಚ್ಚಿದ ಮಾತಂಗ ಮಾರ್ಗ

ಪರ್ವತದ ಮೇಲೆ ಹೋಗಲು ಪ್ರವಾಸಿಗರ ಹಿಂದೇಟು; ದೇಶ–ವಿದೇಶದವರ ನೆಚ್ಚಿನ ತಾಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ದಟ್ಟ ಪೊದೆಯಿಂದ ಆವರಿಸಿಕೊಂಡಿರುವ ಹಂಪಿ ಮಾತಂಗ ಪರ್ವತಕ್ಕೆ ಹೋಗುವ ಮಾರ್ಗ
ದಟ್ಟ ಪೊದೆಯಿಂದ ಆವರಿಸಿಕೊಂಡಿರುವ ಹಂಪಿ ಮಾತಂಗ ಪರ್ವತಕ್ಕೆ ಹೋಗುವ ಮಾರ್ಗ   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಮಾತಂಗ ಪರ್ವತದ ಮಾರ್ಗವು ಮುಳ್ಳು, ಪೊದೆಗಳಿಂದ ಸಂಪೂರ್ಣ ಆವರಿಸಿಕೊಂಡಿದ್ದು, ಪ್ರವಾಸಿಗರು ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಮಾತಂಗ ಬೆಟ್ಟಕ್ಕೆ ಹೋಗುವ ಮಾರ್ಗವು ಸಾಕಷ್ಟು ತಿರುವುಗಳಿಂದ ಕೂಡಿದೆ. ಆರಂಭದಿಂದ ಕೊನೆಯವರೆಗೆ ಕಲ್ಲಿನ ಮೆಟ್ಟಿಲುಗಳಿವೆ. ಆದರೆ, ಬಂಡೆಗಲ್ಲುಗಳು, ಕುರುಚಲು ಕಾಡಿನ ನಡುವೆ ಮಾರ್ಗ ಹಾದು ಹೋಗಿದೆ. ಎರಡು ತಿಂಗಳಿಂದ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದರಿಂದ ಮಾರ್ಗದ ಸುತ್ತಮುತ್ತಲಿನ ಮುಳ್ಳು ಕಂಟಿ, ಪೊದೆ ದಟ್ಟವಾಗಿ ಬೆಳೆದು ಇಡೀ ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಅಲ್ಲಿ ಯಾವುದೇ ಮಾರ್ಗ ಇಲ್ಲವೇನೋ ಎಂಬಂತೆ ಭಾಸವಾಗುತ್ತಿದೆ.

ಹಂಪಿಯಲ್ಲಿ ಮಾತಂಗ ಪರ್ವತ ಬಹಳ ಎತ್ತರದ ಜಾಗದಲ್ಲಿದೆ. ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳಲು ಹೆಚ್ಚಿನವರು ಬೆಟ್ಟದ ಮೇಲೆ ಹೋಗುತ್ತಾರೆ. ತುಂಗಭದ್ರಾ ನದಿ ಹರಿದು ಹೋಗುವ ಪ್ರದೇಶ, ವಿರೂಪಾಕ್ಷೇಶ್ವರ ದೇವಸ್ಥಾನ, ಹೇಮಕೂಟ, ಅಚ್ಯುತರಾಯ ದೇವಸ್ಥಾನ, ಅಂಜನಾದ್ರಿ ಸೇರಿದಂತೆ ಸುತ್ತಮುತ್ತಲಿನ ಸ್ಮಾರಕ, ಬೆಟ್ಟ ಗುಡ್ಡಗಳು ನಯನ ಮನೋಹರವಾಗಿ ಕಾಣುತ್ತವೆ. ಇದನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ವಿಡಿಯೊ, ಛಾಯಾಗ್ರಹಣಕ್ಕೆಂದೇ ಹಲವರು ವಿವಿಧ ಕಡೆಗಳಿಂದ ಬಂದು ಡೇರೆ ಹಾಕುತ್ತಾರೆ.

ADVERTISEMENT

ಅದರಲ್ಲೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಿದು. ಅಷ್ಟರಮಟ್ಟಿಗೆ ಮಾತಂಗ ಪರ್ವತ ಪ್ರಸಿದ್ಧಿ ಪಡೆದಿದೆ. ಆದರೆ, ಅದಕ್ಕೆ ಹೋಗುವ ಮಾರ್ಗದ ಸೂಕ್ತ ನಿರ್ವಹಣೆ ಇಲ್ಲದರಿಂದ ಈಗ ಪ್ರವಾಸಿಗರು ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಎರಡು ತಿಂಗಳ ಲಾಕ್‌ಡೌನ್‌ ತೆರವಾದ ನಂತರ ಸಾಕಷ್ಟು ಪ್ರವಾಸಿಗರು ಹಂಪಿಗೆ ಭೇಟಿ ಕೊಡುತ್ತಿದ್ದಾರೆ. ಹೀಗಿದ್ದರೂ ಮಾರ್ಗ ನಿರ್ವಹಣೆಗೆ ಅಲಕ್ಷ್ಯ ತೋರುತ್ತಿರುವುದಕ್ಕೆ ಸ್ಮಾರಕಪ್ರಿಯರು, ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಲಾಕ್‌ಡೌನ್‌ಗೂ ಮುನ್ನ ನಮ್ಮ ಕಾರ್ಯಕರ್ತರೆಲ್ಲ ಸೇರಿಕೊಂಡು ಮಾತಂಗ ಪರ್ವತದ ಮಾರ್ಗದಲ್ಲಿನ ಮುಳ್ಳು, ಪೊದೆ ತೆರವುಗೊಳಿಸಿದ್ದೆವು. ಈಗ ಅಲ್ಲಿ ಸಾಕಷ್ಟು ಪೊದೆ ಬೆಳೆದಿರುವುದರಿಂದ ಮಾರ್ಗವೇ ಗೋಚರಿಸುತ್ತಿಲ್ಲ. ಸ್ಥಳೀಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಅಸಮಾಧಾನ ಹೊರಹಾಕಿದ್ದಾರೆ.

‘ಹಂಪಿ ವಿಶ್ವ ಪ್ರಸಿದ್ಧ ತಾಣ. ದೇಶ–ವಿದೇಶಗಳಿಂದ ಪ್ರವಾಸಿಗರು ಬಂದು ಹೋಗುತ್ತಾರೆ. ಅದರಲ್ಲೂ ಮಾತಂಗ ಪರ್ವತಕ್ಕೆ ಹೆಚ್ಚಿನವರು ಭೇಟಿ ಕೊಡುತ್ತಾರೆ. ಇಡೀ ಮಾರ್ಗ ಪೊದೆಗಳಿಂದ ಸುತ್ತುವರಿದಿದ್ದರೂ ಅದನ್ನು ತೆರವುಗೊಳಿಸದೇ ಇರುವುದು ಸರಿಯಾದ ಕ್ರಮವಲ್ಲ. ಮೊದಲೇ ಹಂಪಿಯಲ್ಲಿ ಸಾಕಷ್ಟು ಚಿರತೆಗಳು ಓಡಾಡುತ್ತವೆ. ಈ ರೀತಿ ಪೊದೆ ಬೆಳೆಯಲು ಬಿಟ್ಟರೆ ಯಾರೊಬ್ಬರೂ ಅಲ್ಲಿಗೆ ಸುಳಿಯುವುದಿಲ್ಲ. ಚಿರತೆಗಳ ಆವಾಸಸ್ಥಾನವಾಗಿ ಬದಲಾಗಬಹುದು. ಅದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ.

‘ಬೆಟ್ಟದ ಮೇಲಿನಿಂದ ಹಂಪಿಯ ಸೊಬಗು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಇಷ್ಟಪಡುತ್ತಾರೆ. ಆದರೆ, ಪೊದೆ ಬೆಳೆದಿರುವುದರಿಂದ ಯಾರೂ ಬೆಟ್ಟದ ಮೇಲೆ ಹೋಗಲು ಸದ್ಯ ಇಷ್ಟಪಡುತ್ತಿಲ್ಲ. ಅನೇಕ ಸ್ಮಾರಕಗಳ ಸುತ್ತಲೂ ಇದೇ ರೀತಿ ಪೊದೆ ಬೆಳೆದಿದೆ. ಅದನ್ನು ತೆರವುಗೊಳಿಸಿ, ಸೂಕ್ತ ನಿರ್ವಹಣೆ ಮಾಡಬೇಕು’ ಎನ್ನುತ್ತಾರೆ ಗೈಡ್‌ ರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.