ಬಳ್ಳಾರಿ: ಹಾಸನದಲ್ಲಿ ಶುಕ್ರವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ಬಳ್ಳಾರಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ಮೃತದೇಹವನ್ನು ಶನಿವಾರ ಬೆಳಿಗ್ಗೆ ನಗರದ ನಾಗಲಕೆರೆಗೆ ತರಲಾಯಿತು.
ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮನ ಕಳೆದುಕೊಂಡ ಅಕ್ಕನ ಗೋಳು ಎಂಥವರ ಮನಸ್ಸನ್ನೂ ಕಲಕುವಂತಿತ್ತು. ಕುಟುಂಬಸ್ಥರ ದುಃಖಕ್ಕೆ ಅಕ್ಕಪಕ್ಕದ ಮನೆಯವರೂ ಮಮ್ಮಲ ಮರುಗಿದರು. ಇಡೀ ನಾಗಲಕೆರೆ ಪ್ರದೇಶವೇ ಕಣ್ಣೀರು ಹಾಕಿತು.
ಪ್ರವೀಣ್ ತಾಯಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾ, ಮನೆಗೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಬಡತನದ ನಡುವೆಯೇ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದರು’ ಎಂದು ಸಂಬಂಧಿಗಳು ಹೇಳಿದರು.
‘ಪ್ರವೀಣ್ ಚಿಕ್ಕವನಾಗಿದ್ದಾಗಲೇ ತಂದೆ ತೀರಿಕೊಂಡಿದ್ದರು. ತಾಯಿಯೇ ಆತನನ್ನು ಸಾಕಿ ಬೆಳೆಸಿದ್ದರು. ಪ್ರವೀಣ್‌ಗೆ ಇಂಜಿನಿಯರಿಂಗ್ ಸೀಟು ಹಾಸನದಲ್ಲಿ ಸಿಕ್ಕಿತ್ತು. ಇನ್ನೊಂದು ವರ್ಷ ಕಳೆದಿದ್ದರೆ ಆತನಿಗೆ ಕೆಲಸ ಸಿಕ್ಕು ನಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತಿದ್ದನೋ ಏನೋ. ಈಗ ಪ್ರಾಣ ಕಳೆದುಕೊಂಡು ಮನೆಗೆ ಬಂದಿದ್ದಾನೆ’ ಎಂದು ಆತನ ಅಜ್ಜಿ ಅಂಜಿನಮ್ಮ ನೋವಿನಿಂದ ಹೇಳಿದರು.
₹10 ಲಕ್ಷ ಪರಿಹಾರ ಕೊಡಿ:
ಮಾಜಿ ಸಚಿವ ಬಿ. ಶ್ರೀರಾಮುಲು, ಮೇಯರ್ ಮುಲ್ಲಂಗಿ ನಂದೀಶ್ ಅವರು ಪ್ರವೀಣ್ ಮೃತದೇಹದ ಅಂತಿಮ ದರ್ಶನ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ‘ಪ್ರವೀಣ್ ಬಡಕುಟುಂಬದಿಂದ ಬಂದಾತ. ಆತನಿಗೆ ಸ್ಥಳೀಯರೂ ನೆರವು ನೀಡಿ ಓದಿಸಿದ್ದಾರೆ. ಎರಡು– ಮೂರು ತಿಂಗಳಲ್ಲಿ ಕೆಲಸಕ್ಕೆ ಸೇರಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳುತ್ತಿದ್ದ ಎನ್ನಲಾಗಿದೆ. ಸದ್ಯ ಮುಖ್ಯಮಂತ್ರಿ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕೇಂದ್ರವೂ ₹2 ಲಕ್ಷ ಪರಿಹಾರ ಕೊಡುವುದಾಗಿ ಹೇಳುತ್ತಿದೆ. ಏನೇ ಮಾಡಿದರೂ ನಾವು ಮರಳಿ ಆತನನ್ನು ತರಲು ಸಾಧ್ಯವಿಲ್ಲ. ಆದರೆ, ಆತನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಸರ್ಕಾರ ಕನಿಷ್ಠ ₹10 ಲಕ್ಷ ಪರಿಹಾರ ಒದಗಿಸಬೇಕು. ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಯುವಕರೇ ಆಗಿರುವುದರಿಂದ ಎಲ್ಲರಿಗೂ ತಲಾ ₹10 ಲಕ್ಷ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು.
ಮೇಯರ್ ನಂದೀಶ್ ಮಾತನಾಡಿ, ‘ಇಂಥ ಘಟನೆ ಯಾವುದೇ ಕುಟುಂಬದಲ್ಲೂ ಆಗಬಾರದು. ಪ್ರವೀಣ್ ಬುದ್ಧಿವಂತ ಹುಡುಗ. ಆತನ ಕುಟುಂಬಕ್ಕೆ ನಮ್ಮ ಪಾಲಿಕೆಯಿಂದ ಆಗಬಹುದಾದ ನೆರವು ನೀಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.
ಕುಟುಂಬಕ್ಕೆ ಮಾಹಿತಿ ಇರಲಿಲ್ಲ
‘ಹಾಸನದಲ್ಲಿ ದುರ್ಘಟನೆ ನಡೆದು ಎಲ್ಲೆಡೆ ಸುದ್ದಿ ಹರಡಿದ್ದರೂ ಘಟನೆಯಲ್ಲಿ ಮಗ ಮೃತಪಟ್ಟಿರುವ ಬಗ್ಗೆ ತಾಯಿಗೆ ಮಾಹಿತಿಯೇ ಇರಲಿಲ್ಲ. ಸ್ಥಳೀಯ ಸ್ನೇಹಿತರ ಮೂಲಕ ವಿಷಯ ತಿಳಿಯಿತು’ ಎಂದು ಮೃತನ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ. ‘ನಾನು ಮತ್ತು ಪ್ರವೀಣ್ ನಿತ್ಯ ರಾತ್ರಿ 8 ಗಂಟೆಗೆ ಮಾತನಾಡುತ್ತಿದ್ದೆವು. ಶುಕ್ರವಾರ ರಾತ್ರಿ ಆತನಿಗೆ ಕರೆ ಮಾಡಿದಾಗ ಆತನ ಸ್ನೇಹಿತ ಕರೆ ಸ್ವೀಕರಿಸಿದ್ದ. ಪ್ರವೀಣ್ ಎಲ್ಲಿ ಎಂದು ಕೇಳಿದಾಗ ಅಪಘಾತವಾಗಿದೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೊದಲಿಗೆ ಹೇಳಿದ್ದ. ಮತ್ತೊಮ್ಮೆ ವಿಚಾರಿಸಿದಾಗ ಆತ ಮೃತಪಟ್ಟ ವಿಚಾರ ತಿಳಿಸಿದ್ದ. ಬಳಿಕ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಯಿತು. ವಾಹನವು ಪ್ರವೀಣ್ ತೊಡೆ ಸೊಂಟ ಹೊಟ್ಟೆ ಎದೆವರೆಗೆ ಹರಿದಿತ್ತು. ಹೀಗಾಗಿಯೇ ಆತ ಮೃತಪಟ್ಟಿದ್ದಾನೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.