ADVERTISEMENT

‘ಜಾನಪದ ಕಲೆ ಮುಖೇನ ಆರೋಗ್ಯ ಅರಿವು‘

ಕಲಾ ತಂಡಗಳಿಗೆ ಆರೋಗ್ಯ ಕಾರ್ಯಕ್ರಮಗಳ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 13:55 IST
Last Updated 18 ಜೂನ್ 2019, 13:55 IST
ಕುಲಪತಿ ಪ್ರೊ.ಸ.ಚಿ. ರಮೇಶ, ಕುಲಸಚಿವ ಎ. ಸುಬ್ಬಣ್ಣ ರೈ ಕಾರ್ಯಾಗಾರಕ್ಕೆ ಚಾಲನೆ ನೀಡಿದರು
ಕುಲಪತಿ ಪ್ರೊ.ಸ.ಚಿ. ರಮೇಶ, ಕುಲಸಚಿವ ಎ. ಸುಬ್ಬಣ್ಣ ರೈ ಕಾರ್ಯಾಗಾರಕ್ಕೆ ಚಾಲನೆ ನೀಡಿದರು   

ಹೊಸಪೇಟೆ:ಕಲಬುರಗಿ ವಿಭಾಗ ಮಟ್ಟದ ಜಾನಪದ ಕಲಾ ತಂಡಗಳಿಗೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಕಾರ್ಯಕ್ರಮಗಳ ತರಬೇತಿ ಕಾರ್ಯಾಗಾರ ಮಂಗಳವಾರ ಆರಂಭಗೊಂಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಂಪಿ ಕನ್ನಡ ವಿ.ವಿ. ಕುಲಪತಿ ಪ್ರೊ.ಸ.ಚಿ.ರಮೇಶ,’ಜಾನಪದ ಎನ್ನುವುದು ಜನಸಾಮಾನ್ಯರನ್ನು ತನ್ನತ್ತ ಸೆಳೆಯುವ ಕಲೆಯಾಗಿದೆ. ಸಮಾಜದ ಸ್ವಾಸ್ಥ್ಯಕ್ಕಾಗಿ ಅರಿವು ಮೂಡಿಸುವ ಮಹತ್ತರ ಕಾರ್ಯಕ್ಕೆ ಜಾನಪದ ಕಲೆಯನ್ನು ಒಪ್ಪಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

’ಮೊದಲೆಲ್ಲ ಹೆಬ್ಬೆಟ್ಟು ಒತ್ತುವವರಿಗೆ ಬೆಲೆ ಇರಲಿಲ್ಲ. ಅಂತಹವರ ಬಗ್ಗೆ ಸಮಾಜದಲ್ಲಿ ತಾತ್ಸಾರ ಮನೋಭಾವ ಇತ್ತು. ಆದರೆ, ಈಗ ಹೆಬ್ಬೆಟ್ಟು ಒತ್ತದಿದ್ದರೆ ಮೊಬೈಲ್ ಸೇರಿ ಯಾವುದೇ ತಂತ್ರಾಂಶ ನಡೆಯಲ್ಲ ಎನ್ನುವಷ್ಟರ ಮಟ್ಟಿಗೆ ಬಳಕೆಯಾಗುತ್ತದೆ. ಜಾನಪದ ಕಲಾ ತಂಡಗಳು ಉತ್ತಮವಾಗಿ ಬೀದಿ ನಾಟಕ, ಜಾಗೃತಿ ಗೀತೆಗಳು, ಸಂಭಾಷಣೆ, ಉಡುಗೆ -ತೊಡುಗೆಗಳ ಮೂಲಕ ಹಳ್ಳಿಯ ಜನರಿಗೆ ಆರೋಗ್ಯದ ಅರಿವು ಬಿತ್ತುವಂತಜ ಕೆಲಸ ಮಾಡಬೇಕು‘ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರರೆಡ್ಡಿ, ’ಜಾನಪದ ಕಲಾ ತಂಡಗಳ ಮೂಲಕ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅರಿವು ಮೂಡಿಸುವುದರಿಂದ ಜನಸಾಮಾನ್ಯರಿಗೆ ಸುಲಭವಾಗಿ ಮನದಟ್ಟಾಗುತ್ತದೆ ಎಂಬ ಉದ್ದೇಶದಿಂದ ಇಲಾಖೆ ಈ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದೆ‘ ಎಂದು ಹೇಳಿದರು.

‘ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಐವರು ಸದಸ್ಯರಿಗೆ ಆಯುಷ್ಮಾನ್ ಭಾರತ ಯೋಜನೆ ಮೂಲಕ ತಲಾ ₹5 ಲಕ್ಷ ವರೆಗೆ ವಿವಿಧ ಹಂತದ 1,176 ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬಿಪಿಎಲ್ ಕುಟುಂಬದವರು ಆಯುಷ್ಮಾನ್ ಭಾರತ ಕಾರ್ಡ್ ಪಡೆದು ಯೋಜನೆಯ ಪ್ರಯೋಜನೆ ಪಡೆಯಬೇಕು’ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಅನಿಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಲಕ್ಷ್ಮಿ, ಕನ್ನಡ ವಿ.ವಿ. ಕುಲಸಚಿವ ಎ.ಸುಬ್ಬಣ್ಣ ರೈ, ಚರಿತ್ರೆ ವಿಭಾಗದ ಮುಖ್ಯಸ್ಥ ಚಿನ್ನಸ್ವಾಮಿ ಸೋಸಲೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್, ಆರೋಗ್ಯ ಇಲಾಖೆ ಪ್ರಚಾರ ಆಂದೋಲನದ ನಿರ್ದೇಶಕ ರಾಮಾಂಜನೇಯ, ಐ.ಇ.ಸಿ. ವಿಭಾಗದ ಮುಖ್ಯಸ್ಥ ಪ್ರಕಾಶ ಸ್ವಾಮಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಜಿಲ್ಲಾ ಕುಷ್ಠರೋಗ ಮೇಲ್ವಿಚಾರಕ ಎಂ.ಧರ್ಮನಗೌಡ, ಆರು ಜಿಲ್ಲೆಗಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, 22 ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.