ADVERTISEMENT

ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ: ಪ್ರಸನ್ನಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:40 IST
Last Updated 29 ಅಕ್ಟೋಬರ್ 2025, 5:40 IST
ಕೊಟ್ಟೂರಿನಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು
ಕೊಟ್ಟೂರಿನಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು   

ಕೊಟ್ಟೂರು: ಎಲ್ಲ ಸಮುದಾಯದವರು ತಮ್ಮ ಜಾತಿಗೆ ಸೀಮಿತವಾಗದೇ ನೀತಿಗೆ ಸೀಮಿತವಾದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ವಾಲ್ಮೀಕಿ ನವ ಯುವಕ ಸಮಾಜ ಸೇವಾ ಸಂಘದ ವತಿಯಿಂದ ಮಂಗಳವಾರ ಚಿರಬಿ ರಸ್ತೆಯ ಗದ್ದುಗೆ ಮಠದ ಆವರಣದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ಹಾಗಾಗಿ ಆದಿಕವಿಯ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.

ADVERTISEMENT

ಆಧುನಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧ ಸಡಿಲಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದ ಅವರು ಸಮುದಾಯದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಸಮುದಾಯ ಸದೃಢಗೊಳ್ಳಲು ಸಾಧ್ಯ ಎಂದರು.

ಜ್ಙಾನಗುರು ವಿದ್ಯಾ ಪೀಠದ ಕಾರ್ಯದರ್ಶಿ ಎಂ.ಎಂ.ಜೆ.ಹರ್ಷವರ್ಧನ್ ಉದ್ಘಾಟಿಸಿ ಮಾತನಾಡಿ ರಾಮಾಯಣದಂತಹ ಮಹಾಕಾವ್ಯದಲ್ಲಿ ಬದುಕಿನ ಎಲ್ಲ ಅಂಶಗಳು ಅಡಕವಾಗಿವೆ ಎಂದರು. ಪಟ್ಟಣದಲ್ಲಿ ಎಲ್ಲ ಜನಾಂಗದವರು ಸಹೋದರರಂತೆ ಬಾಳುತ್ತಿರುವುದು ಮಾದರಿಯಾಗಿದೆ ಎಂದರು.

ಬಳ್ಳಾರಿ ವಿ.ಎಸ್.ಕೆ. ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟ್ರಾರ್ ಎನ್.ಗೋಪಾಲ್ ಉಪನ್ಯಾಸ ನೀಡಿ ಸನಾತನ ಹಿಂದೂ ಧರ್ಮ ಉಳಿದುಕೊಂಡು ಬಂದಿರುವುದಕ್ಕೆ ವಾಲ್ಮೀಕಿ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.

ಕಟ್ಟೆಮನಿ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯರು, ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ವಾಲ್ಮೀಕಿ ನವ ಯುವಕ ಸಮಾಜ ಸೇವಾ ಸಂಘದ ಅಧ್ಯಕ್ಷ ಕೂಡ್ಲಿಗಿ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಿ.ರೇಖಾ ರಮೇಶ್, ಉಪಾಧ್ಯಕ್ಷ ಜಿ.ಸಿದ್ಧಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಿನಮ್ಮ ವಿರುಪಾಕ್ಷಪ್ಪ ಹಾಗೂ ಸದಸ್ಯರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ.ದಾರುಕೇಶ್ ಮುಖಂಡರಾದ ಚಾಪಿ ಚಂದ್ರಪ್ಪ,ಬಿ.ಮರಿಸ್ವಾಮಿ, ಸೂರ್ಯ ಪಾಪಣ್ಣ, ಚಿರಬಿ ಕೊಟ್ರೇಶ್, ಶ್ರೀನಿವಾಸ್, ಎಂ.ಎಂ.ಜೆ.ಶೋಭಿತ್, ಬೂದಿ ಶಿವಕುಮಾರ್, ಬಿ.ಪಿ.ತಿಪ್ಪೇಸ್ವಾಮಿ, ಎಚ್.ಕೊಟ್ರೇಶ್, ನಾಗರಾಜ್, ರವೀಂದ್ರ, ಬಿ.ರೇಖಾ ಕೃಷ್ಣಮೂರ್ತಿ, ಜಾತಪ್ಪ ಪಾಲ್ಗೊಂಡಿದ್ದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಕಲ ವಾದ್ಯ ಮೇಳಗಳು ಹಾಗೂ ಜನಪದ ತಂಡಗಳೊಂದಿಗೆ ಚಾಲನೆಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.