ADVERTISEMENT

ಹೂವಿನಹಡಗಲಿ: ವ್ಯಾಪಕ ಮಳೆ, ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ

ಮಲೆನಾಡು, ಜಲಾನಯನ ಪ್ರದೇಶದಲ್ಲಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 5:30 IST
Last Updated 9 ಜುಲೈ 2022, 5:30 IST
ಹೂವಿನಹಡಗಲಿ ತಾಲ್ಲೂಕು ಕುರುವತ್ತಿ ಬಳಿ ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದು
ಹೂವಿನಹಡಗಲಿ ತಾಲ್ಲೂಕು ಕುರುವತ್ತಿ ಬಳಿ ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದು   

ಹೂವಿನಹಡಗಲಿ: ಮಲೆನಾಡು ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ತಾಲ್ಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ತಾಲ್ಲೂಕಿನ ಹಿರೇಬನ್ನಿಮಟ್ಟಿಯಲ್ಲಿ ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ. ಅಂದಾಜು 50-60 ಎಕರೆಯಷ್ಟು ಭತ್ತ, ಕಬ್ಬು, ಮೆಕ್ಕೆಜೋಳದ ಬೆಳೆಗಳು ಜಲಾವೃತಗೊಂಡಿವೆ.

ತಹಶೀಲ್ದಾರ್ ಪ್ರತಿಭಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್ ಬೆಣ್ಣಿ ಅವರು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಸ್ಥಿತಿಯನ್ನು ಅವಲೋಕಿಸಿದ್ದಾರೆ.

ADVERTISEMENT

‘ಸದ್ಯದ ಮಟ್ಟಿಗೆ ಯಾವುದೇ ಅಪಾಯ ಇಲ್ಲ. ಒಳ ಹರಿವು ಹೆಚ್ಚಾದಲ್ಲಿ ಕುರುವತ್ತಿ, ಅಂಗೂರು, ಮದಲಗಟ್ಟಿ ಗ್ರಾಮಗಳ ಕೆಲ ಕುಟುಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇವೆ. ಮೂರು ಗ್ರಾಮಗಳ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಂಡಿದ್ದೇವೆ. ಗ್ರಾಮಲೆಕ್ಕಾಧಿಕಾರಿ, ಪಿಡಿಒಗಳು ಕೇಂದ್ರ ಸ್ಥಳದಲ್ಲೇ ಇದ್ದು ಪ್ರವಾಹ ಸ್ಥಿತಿಯ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಪ್ರತಿಭಾ ತಿಳಿಸಿದರು.

‘ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ತೀರದ ಜನರು ನದಿಗೆ ಇಳಿಯಬಾರದು. ನದಿಯ ನೀರನ್ನು ನೇರವಾಗಿ ಸೇವಿಸದೇ ಕುದಿಸಿ, ಆರಿಸಿ ಸೇವಿಸಬೇಕು’ ಎಂದು ಹೇಳಿದರು. ತಾಲ್ಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ನಲ್ಲಿ 74,443 ಕ್ಯುಸೆಕ್ ಒಳ ಹರಿವು ದಾಖಲಾಗಿದೆ. ‘ಬ್ಯಾರೇಜ್ ಸಂಗ್ರಹಣಾ ಸಾಮರ್ಥ್ಯ ಆಧರಿಸಿ 17 ಗೇಟುಗಳನ್ನು ತೆರೆದು ನೀರು ಬಿಡಲಾಗಿದೆ. ನದಿಯ ಹತ್ತಿರ ಜನ ಹೋಗಬಾರದು’ ಎಂದು ಸಿಂಗಟಾಲೂರು ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಐಗೋಳ ಪ್ರಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.