ADVERTISEMENT

ನೀರಿನ ದಾಹ ನೀಗಿಸುವ ಒರತೆ

ಹೊಳಗುಂದಿಯಲ್ಲಿ ಬೇಸಿಗೆಯಲ್ಲೂ ಉಕ್ಕುವ ಜೀವಜಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 11:08 IST
Last Updated 21 ಮಾರ್ಚ್ 2019, 11:08 IST
ಹೊಳಗುಂದಿಯಲ್ಲಿ ಜನರು ಒರತೆಯಲ್ಲಿ ನೀರು ತುಂಬುತ್ತಿರುವುದು
ಹೊಳಗುಂದಿಯಲ್ಲಿ ಜನರು ಒರತೆಯಲ್ಲಿ ನೀರು ತುಂಬುತ್ತಿರುವುದು   

ಹೂವಿನಹಡಗಲಿ: ಮಳೆಯ ಕೊರತೆ, ಏರುತ್ತಿರುವ ತಾಪಮಾನದಿಂದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಎಲ್ಲೆಡೆ ಜೀವಜಲಕ್ಕಾಗಿ ಪರದಾಡುವ ಸ್ಥಿತಿ ಇದೆ. ಆದರೆ, ತಾಲ್ಲೂಕಿನ ಹೊಳಗುಂದಿ ಗ್ರಾಮದ ಒರತೆಗಳಲ್ಲಿ ಕಡು ಬೇಸಿಗೆಯಲ್ಲೂ ಜೀವಜಲ ಉಕ್ಕುತ್ತದೆ. ನೂರಾರು ವರ್ಷಗಳಿಂದ ಇಲ್ಲಿನ ಒರತೆಗಳು ಜನರ ನೀರಿನ ದಾಹ ತಣಿಸುತ್ತಿವೆ.

ಹೊಳಗುಂದಿ ಗ್ರಾಮದ ಸಿದ್ದೇಶ್ವರಬೆಟ್ಟದ ಸುತ್ತಮುತ್ತ ನೀರಿನ ಒರತೆಗಳು ಇವೆ. ಒಂದು ಒರತೆ ಕೆರೆಯಲ್ಲಿ ಲೀನವಾಗಿದ್ದರೆ, ಮತ್ತೊಂದು ಒರತೆ ಪುನಶ್ಚೇತನ ಕಾಣದೇ ಬತ್ತಿದೆ. ಬೆಟ್ಟದ ಇಳಿಜಾರಿನಲ್ಲಿ ಇರುವ ಚನ್ನಮ್ಮನ ಒರತೆಯಲ್ಲಿ ಮಾತ್ರ ಇಂದಿಗೂ ಸಿಹಿ ನೀರು ಉಕ್ಕುತ್ತದೆ. ಇಲ್ಲಿ ಮೊಗೆದಷ್ಟೂ ನೀರು ಸಂಗ್ರಹವಾಗುತ್ತಲೇ ಇರುತ್ತದೆ. ಗ್ರಾಮದ ಜನರ ಪಾಲಿಗೆ ಈ ಒರತೆ ನೀರಿನ ಅಕ್ಷಯ ಪಾತ್ರೆಯಾಗಿದೆ.

ಇಲ್ಲಿ ಸದಾ ಜಿನುಗುವ ಜೀವಜಲಕ್ಕೆ ತಲೆಮಾರುಗಳ ಇತಿಹಾಸವಿದೆ. ಗ್ರಾಮದ ಜನತೆ ಮೊದಲು ಕುಡಿಯುವ ಮತ್ತು ಬಳಸುವ ನೀರಿಗಾಗಿ ಒರತೆಗಳನ್ನೇ ಅವಲಂಬಿಸಿದ್ದರು. ಸರ್ಕಾರ ಕೊಳವೆ ಬಾವಿಯ ನೀರನ್ನು ಮನೆ ಬಾಗಿಲಿಗೇ ಪೂರೈಕೆ ಮಾಡಿದ್ದರಿಂದ ಒರತೆ ನೀರನ್ನು ನಿಯಮಿತವಾಗಿ ಕುಡಿಯಲು ಮಾತ್ರ ಕೊಂಡೊಯ್ಯುತ್ತಿದ್ದಾರೆ.

ADVERTISEMENT

ಸದ್ಯ ಗ್ರಾಮದಲ್ಲಿ ಕೊಳವೆ ಬಾವಿಯ ನೀರು ಪ್ರತಿ ಮನೆಗೂ ಪೂರೈಕೆಯಾಗುತ್ತಿದೆ. ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕವನ್ನೂ ತೆರೆದಿದೆ. ಆದರೂ ಗ್ರಾಮದ ಕೆಲವು ಜನರು ಕುಡಿಯುವ ನೀರಿಗಾಗಿ ಒರತೆಯ ನೀರನ್ನೇ ಅವಲಂಬಿಸಿದ್ದಾರೆ. ಇಲ್ಲಿ ಮೊಗೆದಷ್ಟು ನೀರು ಬರುತ್ತಲೇ ಇರುತ್ತದೆ. ಆದರೆ ನಿಧಾನವಾಗಿ ಜಿನುಗುವ ನೀರನ್ನು ಸಂಗ್ರಹಿಸಿಕೊಳ್ಳುವ ತಾಳ್ಮೆ ಬೇಕಷ್ಟೇ.

ಸಿದ್ದೇಶ್ವರ ಬೆಟ್ಟದಲ್ಲಿ ಇಂಗುವ ಮಳೆಯ ನೀರು ಬಂಡೆಗಳ ಪದರಗಳ ಅಡಿಯಿಂದ ಸದಾ ಜಿನುಗುತ್ತಿರುತ್ತದೆ. ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಒರತೆ ತುಂಬಿ ಹರಿದರೆ, ಬೇಸಿಗೆಯಲ್ಲಿ ನೀರ ಸೆಲೆ ಸ್ವಲ್ಪ ಕಡಿಮೆಯಾಗುತ್ತದೆ. ವಿದ್ಯುತ್ ವ್ಯತ್ಯಯ, ನೀರು ಪೂರೈಕೆಯಲ್ಲಿ ವ್ಯತ್ಯಾಸವಾದ ಸಂದರ್ಭದಲ್ಲಿ ಒರತೆಯ ಬಳಿ ಸರದಿ ಸಾಲು ಕಂಡುಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

‘ನಮ್ಮ ಮನೆಗೆ ನೀರಿನ ನಳದ ಸಂಪರ್ಕ ಪಡೆದಿದ್ದರೂ ಕುಡಿಯಲು ಒರತೆಯ ನೀರನ್ನೇ ಬಳಸುತ್ತೇವೆ. ಫ್ಲೋರೈಡ್‌ ಮುಕ್ತವಾಗಿರುವ ಈ ನೈಸರ್ಗಿಕ ನೀರು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನಿಸಿದೆ. ನಮ್ಮ ಹಿರಿಯರ ಕಾಲದಿಂದಲೂ ಇದೇ ನೀರನ್ನು ಸೇವಿಸುತ್ತಿದ್ದೇವೆ’ ಎಂದು ಗ್ರಾಮದ ನಿವಾಸಿ ಕೆ.ಎಸ್.ಯತಿರಾಜ, ಮುದೇಗೌಡ್ರ ಪ್ರಕಾಶ್ ಹೇಳಿದರು.

‘ಗ್ರಾಮದಲ್ಲಿ ರಸ್ತೆಗಳು ಸುಸ್ಥಿತಿಯಲ್ಲಿದ್ದರೂ ಕಿತ್ತು ರಿಪೇರಿ ಮಾಡುತ್ತಾರೆ. ಅನವಶ್ಯಕ ಕಾಮಗಾರಿಗಳನ್ನು ಕೈಗೊಂಡು ತೆರಿಗೆ ಹಣ ಪೋಲು ಮಾಡುತ್ತಾರೆ. ಆದರೆ, ಜನರ ನೀರಿನ ದಾಹ ನೀಗಿರುವ ಜಲಮೂಲಗಳ ರಕ್ಷಣೆಗೆ ಯಾರೂ ಆಸಕ್ತಿ ತೋರುತ್ತಿಲ್ಲ’ ಎಂದು ಬೇಸರಿಸುವ ಅವರು, ‘ಅಪರೂಪವಾಗಿರುವ ಒರತೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.