ADVERTISEMENT

ಹಂಪಿಯಲ್ಲಿ ಪಾರಂಪರಿಕ ನಡಿಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 11:03 IST
Last Updated 28 ಫೆಬ್ರುವರಿ 2019, 11:03 IST
ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪಾರಂಪರಿಕ ನಡಿಗೆಯ ಮಾರ್ಗ ಮಧ್ಯದಲ್ಲಿ ಕಡಲೆಕಾಳು ಗಣಪ ಸ್ಮಾರಕ ಎದುರಿನ ಮಂಟಪದ ಎದುರು ಶಾಲಾ ಮಕ್ಕಳಿಗೆ ಮಾರ್ಗದರ್ಶಿಗಳು ಅದರ ಮಹತ್ವ ವಿವರಿಸಿದರು
ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪಾರಂಪರಿಕ ನಡಿಗೆಯ ಮಾರ್ಗ ಮಧ್ಯದಲ್ಲಿ ಕಡಲೆಕಾಳು ಗಣಪ ಸ್ಮಾರಕ ಎದುರಿನ ಮಂಟಪದ ಎದುರು ಶಾಲಾ ಮಕ್ಕಳಿಗೆ ಮಾರ್ಗದರ್ಶಿಗಳು ಅದರ ಮಹತ್ವ ವಿವರಿಸಿದರು   

ಹೊಸಪೇಟೆ: ಆಗತಾನೇ ಬೆಳಕು ಹರಿದಿತ್ತು. ಹಕ್ಕಿಗಳು ಗೂಡು ಬಿಟ್ಟು ಹೊರಹೋಗುತ್ತಿದ್ದರೆ ಜನ, ಶಾಲಾ ಮಕ್ಕಳು ಮನೆಯಿಂದ ಹಂಪಿ ಕಡೆ ಮುಖ ಮಾಡಿದ್ದರು. ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತ ಹಂಪಿ ಪರಿಸರದಲ್ಲಿ ಹೆಜ್ಜೆ ಹಾಕಿದರು.

ಹಂಪಿ ಉತ್ಸವದ ಪ್ರಯುಕ್ತ ಗುರುವಾರ ತಾಲ್ಲೂಕಿನ ಹಂಪಿಯಲ್ಲಿ ಹಮ್ಮಿಕೊಂಡಿದ್ದ ಪಾರಂಪರಿಕ ನಡಿಗೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

ಮಾರ್ಗದರ್ಶಿಗಳು ಹಂಪಿ ಪರಿಸರದ ಪ್ರತಿಯೊಂದು ಕಲ್ಲು ಬಂಡೆ, ಸ್ಮಾರಕಗಳ ಮಹತ್ವವನ್ನು ತಿಳಿಸಿಕೊಡುತ್ತಿದ್ದರು. ಜನ ಹಾಗೂ ಶಾಲಾ ಮಕ್ಕಳು ಅಷ್ಟೇ ತದೇಕ ಚಿತ್ತದಿಂದ ಅದನ್ನು ಆಲಿಸುತ್ತಿದ್ದರು. ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ADVERTISEMENT

ಹಂಪಿಯ ಅಕ್ಕ–ತಂಗಿಯರ ಗುಡ್ಡದ ಬಳಿ ಆರಂಭವಾದ ಪಾರಂಪರಿಕ ನಡಿಗೆಯುಉದ್ದಾನ ವೀರಭದ್ರ ದೇವಸ್ಥಾನ, ಉಗ್ರ ನರಸಿಂಹ, ಬಡವಿಲಿಂಗ, ಕೃಷ್ಣ ದೇವಸ್ಥಾನ, ಕೃಷ್ಣ ಬಜಾರ್‌, ಸಾಸಿವೆಕಾಳು, ಕಡಲೆಕಾಳು ಗಣಪ, ರಥಬೀದಿ ಮೂಲಕ ಹಾದು ಎದುರು ಬಸವಣ್ಣ ಮಂಟಪದ ಎದುರು ಕೊನೆಗೊಂಡಿತು.

ಎಳೆ ಬಿಸಿಲಿನಲ್ಲಿ ಹಿರಿಯರು, ಯುವಕರು, ಶಾಲಾ ಮಕ್ಕಳು ಉತ್ಸಾಹದಿಂದ ಹೆಜ್ಜೆ ಹಾಕಿದರು. ಅವರೊಂದಿಗೆ ಹೆಜ್ಜೆ ಹಾಕಿದ 30 ಜನ ಮಾರ್ಗದರ್ಶಿಗಳು ಪ್ರತಿಯೊಂದು ಸ್ಮಾರಕದ ಬಗ್ಗೆ ರೋಚಕವಾಗಿ ವಿವರಿಸಿದರು.

ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಚಾಲನೆ ನೀಡಿ, ‘ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಪರಿಸರದಲ್ಲಿ ನಡೆದಾಡುತ್ತ ಅವುಗಳ ಬಗ್ಗೆ ತಿಳಿದುಕೊಳ್ಳುವುದೇ ಪಾರಂಪರಿಕ ನಡಿಗೆಯ ಉದ್ದೇಶ. ಅನೇಕ ವರ್ಷಗಳ ಹಿಂದಿನಿಂದ ಪಶ್ಚಿಮದ ರಾಷ್ಟ್ರಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ’ ಎಂದರು.

‘ಸ್ಮಾರಕಗಳ ಬಗೆಗಿರುವ ಕಥಾನಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಪ್ರತಿಯೊಂದು ಸ್ಮಾರಕ ಅದರದೇ ಮಹತ್ವ ಹೊಂದಿರುತ್ತದೆ’ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್‌ ಲಮಾಣಿ, ‘ಹಂಪಿ ಕುರಿತು ಪ್ರತಿಯೊಬ್ಬರಿಗೂ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಪಾರಂಪರಿಕ ನಡಿಗೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಬೇಕು’ ಎಂದರು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಗೃಹರಕ್ಷಕದಳದ ಸಮಾದೇಷ್ಠ ಶಕೀಬ್, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಸಾಮಾಜಿಕ ಸಮನ್ವಯ ಅಧಿಕಾರಿ ಯಮುನಾ ನಾಯಕ, ಪಿ.ಎಸ್‌.ಐ. ಕಾಳಿಂಗ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.