
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಶನಿವಾರ ಜಾನಪದ ವಾದ್ಯಗಳ ಮೆರವಣಿಗೆ ಸಂಭ್ರಮದ ಮೆರಗು ನೀಡಿತು.
ಹಳೇ ಊರಿನ ನೀರಾವರಿ ಇಲಾಖೆಯ ಆಂಜನೇಯ ದೇವಸ್ಥಾನದಿಂದ ಹೊರಟು ಅಂಬಾಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಜ್ಯ ಹೆದ್ದಾರಿ, ಬಸವೇಶ್ವರ ಬಜಾರ್ ಮೂಲಕ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿತು.
ಕಹಳೆ ವಾದನ, ಹಲಗೆ ವಾದನ, ಡೊಳ್ಳುವಾದನ, ಮಹಿಳೆಯರ ವೀರಗಾಸೆ, ಸಮಾಳ, ನಂದಿಕೋಲು, ಶಂಕು ವಾದನ, ಭದ್ರಕಾಳಿ ನೃತ್ಯ, ಕೋಲಾಟ, ತಾಷರಂಡೋಲು, ಚಂಡೆಮದ್ದಳೆ ಸೇರಿದಂತೆ ವಿವಿಧ ತಂಡಗಳ ಕಲಾವಿದರು ಶೋಭೆ ತಂದರು.
ಶ್ರೀರಾಮನ ಪಟ್ಟಾಭಿಷೇಕ, ಕುಂಭಮೇಳ, ಭಗವದ್ಗೀತೆ, ಶಿವಾಜಿ ಪಟ್ಟಾಭಿಷೇಕದ ಸ್ತಬ್ದಚಿತ್ರಗಳು ಮತ್ತು ಆಟೋಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಸಾಲುಮರದ ತಿಮ್ಮಕ್ಕ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಭಗತ್‍ಸಿಂಗ್ ಅವರ ಚಿತ್ರಗಳ ಮೆರವಣಿಗೆ ನಡೆಯಿತು.
ಚಿಣ್ಣರು ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷಭೂಷಣಗಳಲ್ಲಿ ಗಮನ ಸೆಳೆದರು. ಪಟ್ಟಣದ ವಿವಿಧ ಮಹಿಳಾ ತಂಡಗಳು ಕೇಸರಿ ಧ್ವಜ ಹಿಡಿದು ಸಾಲಿನಲ್ಲಿ ಸಾಗಿದರು, ಪಟ್ಟಣದ ತುಂಬೆಲ್ಲಾ ಕೇಸರಿ ಧ್ವಜಗಳ ಪಾರುಪತ್ಯೆ ಮೆರೆಯಿತು.
ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಶಾಸಕ ಕೆ.ನೇಮರಾಜನಾಯ್ಕ, ಬಿಜೆಪಿ ಪರಾಜಿತ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ, ಸಮಾವೇಶದ ಅಧ್ಯಕ್ಷ ಬಂಡ್ರಿ ವಿಶ್ವನಾಥ, ಅಜ್ಜಯ್ಯಮ ಪುರಸಭೆ ಸದಸ್ಯರಾದ ಕೆ.ಎಂ.ನವೀನ್‍ಕುಮಾರ್, ಜೋಗಿ ಹನುಮಂತಪ್ಪ, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಉಲುವತ್ತಿ ಪಿಕೆಪಿಎಸ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಬದಾಮಿ ಕರಿಬಸವರಾಜ, ಕೋರಗಲ್ ಅರುಣ್‍ಕುಮಾರ್ ಸೇರಿದಂತೆ ಸಾವಿರಾರು ಜನ ಮಹಿಳೆಯರು ಸಹಿತ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಭಾರಿ ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.