ಬಳ್ಳಾರಿ: ನಗರದ ರಾಜ್‌ಕುಮಾರ್ ರಸ್ತೆಯಲ್ಲಿನ ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ‘ಹಿಂದೂ ಮಹಾಗಣಪತಿ’ಯ ಶೋಭಾಯಾತ್ರೆ ಮಂಗಳವಾರ ನಗರದಲ್ಲಿ ಅದ್ಧೂರಿಯಾಗಿ ನೆರವೇರಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಂಗಳವಾದ್ಯಗಳು, ಛಧ್ಮ ವೇಷಧಾರಿಗಳು, ಕೋಲಾಟ ಸೇರಿದಂತೆ ನಾನಾ ಜನಪದ ಕಲಾತಂಡಗಳು ಸಂಭ್ರಮವನ್ನು ಇಮ್ಮಡಿಸಿದವು. ಬಳಿಕೆ ಇದಕ್ಕೆ ಜತೆಯಾದ ಡಿಜೆ ಹಾಡುಗಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹೆಜ್ಜೆ ಹಾಕಿದರು.
ನಗರದ ಗಡಿಗಿ (ರಾಯಲ್) ವೃತ್ತ, ಬೆಂಗಳೂರು ರಸ್ತೆ ಮೂಲಕ ಮೆರವಣಿಗೆ ಸಾಗಿತು. ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಡಿಜೆ ಅನುಮತಿಗಾಗಿ ದಿಡೀರ್ ಪ್ರತಿಭಟನೆ: ಯಾತ್ರೆ ವೇಳೆ ಎರಡು ಸ್ಪೀಕರ್ ಅಳವಡಿಕೆಗಾಗಿ ಅನುಮತಿ ನೀಡಿದ್ದು, ಇದಕ್ಕಿಂತ ಹೆಚ್ಚು ಸ್ಪೀಕರ್ ಅಳವಡಿಕೆಗೆ ಅನುಮತಿಯಿಲ್ಲ ಎಂದು ಪೊಲೀಸರು ಹೇಳುತ್ತಿದ್ದಂತೆ ಇದರಿಂದ ಆಕ್ರೋಶಗೊಂಡ ಸಂಘಟಕರು, ಡಿಜೆಗೆ ಅನುಮತಿ ನೀಡುವಂತೆ ಮೆರವಣಿಗೆ ನಡುವೆಯೇ ರಸ್ತೆಯಲ್ಲಿಯೇ ದಿಡೀರ್ ಪ್ರತಿಭಟನೆ ನಡೆಸಿದರು.
ಬಳಿಕ, ಸ್ಥಳಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಆಗಮಿಸಿ, ಡಿಜೆ ಅನುಮತಿಗೆ ಪಟ್ಟು ಹಿಡಿದರು. ಇದರ ನಡುವೆ ಪೊಲೀಸರೊಂದಿಗೆ ಕೆಲವರು ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು. ಬಳಿಕ, ಬಿ.ಶ್ರೀರಾಮುಲು ಅವರು ಸ್ವತಃ ಮುಂದೆ ನಿಂತು ಡಿಜೆ ಆರಂಭಿಸುವಲ್ಲಿ ಯಶಸ್ವಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.