ADVERTISEMENT

ಸಿರುಗುಪ್ಪ: ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ: ಸಡಗರ ಸಂಭ್ರಮ

ಕಲಾ ತಂಡಗಳಿಂದ ಅದ್ದೂರಿ ಮೆರವಣಿಗೆ: ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:16 IST
Last Updated 7 ಸೆಪ್ಟೆಂಬರ್ 2025, 7:16 IST
ಸಿರುಗುಪ್ಪ ನಗರದಲ್ಲಿ ಶನಿವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಹಾವೇರಿಯ ಹಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಯುವ ಸಂಘದಿಂದ ದೊಡ್ಡಾಟದ ಕುಣಿತ ನೋಡುಗರನ್ನು ರಂಜಿಸಿತು.
ಸಿರುಗುಪ್ಪ ನಗರದಲ್ಲಿ ಶನಿವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಹಾವೇರಿಯ ಹಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಯುವ ಸಂಘದಿಂದ ದೊಡ್ಡಾಟದ ಕುಣಿತ ನೋಡುಗರನ್ನು ರಂಜಿಸಿತು.   

ಸಿರುಗುಪ್ಪ: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಹಿಂದೂ ಮಹಾ ಗಣಪತಿ ಸಮಿತಿ ವತಿಯಿಂದ ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯು 11ನೇ ದಿನದ ವಿಸರ್ಜನೆಯ ಅಂಗವಾಗಿ ಬೃಹತ್ ಶೋಭಾಯಾತ್ರೆ ಶನಿವಾರ ಸಡಗರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಗಣಪತಿಗೆ ಪೂಜೆ, ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ 12ಗಂಟೆಗೆ ಆರಂಭವಾದ ಶೋಭಾ ಯಾತ್ರೆ ನಗರದ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ಪೊಲೀಸ್‌ ಠಾಣೆಯ ರಸ್ತೆ ಮೂಲಕ ವಾಲ್ಮೀಕಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತ ಹಾಯ್ದು ಪ್ಯಾಟೆ ಅಂಜನೇಯ್ಯ ದೇವಸ್ಥಾನದ ಮುಂದೆ ಅಂಬಿಗರ ವೃತ್ತ, ಕೊಟ್ಟೂರೇಶ್ವರ ದೇವಾಸ್ಥಾನದ ದೇಶನೂರು ರಸ್ತೆ ಮೂಲಕ ಶಂಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ತೆರಳಿ ತುಂಗ್ರಭದ್ರ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಶೋಭಾಯಾತ್ರೆಯಲ್ಲಿ ಹಾವೇರಿಯ ಹಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಯುವ ಸಂಘದಿಂದ ದೊಡ್ಡಾಟ ರಂಜಿಸಿತು. ಸಿರುಗುಪ್ಪ ನೇಹರಂಗ ಕಲಾ ತಂಡದ ವಿಶೇಷ ಡೊಳ್ಳು ವಾದ್ಯ ಎಲ್ಲಾರನ್ನು ಆಕರ್ಷಿಸಿತು.

ADVERTISEMENT

ಸಿರುಗುಪ್ಪ ತಾಲ್ಲೂಕಿನ ಅಗಸನೂರು ಗ್ರಾಮದ 20 ತಮಟೆ ನಾದದ ಶಬ್ದವು ನೋಡುಗರನ್ನು ಮೋಡಿ ಮಾಡಿತು. ಗಜೇಂದ್ರಗಡದ ಚಂಡಿ ಮೇಳ ಅಪರೂಪವಾಗಿ ಚುಟುಕು ನೀಡಿತು. ಆರ್ಯವೈಶ್ಯ ಮಹಿಳಾ ತಂಡದಿಂದ ಕೋಲಾಟ ಸದ್ದು ಮಾಡಿತು. ನಾಗವೇಷಧಾರಿಗಳ ಕುಣಿತ ನೋಡುಗರು ಕಣ್ಣರಳಿಸಿ ನೋಡುವಂತೆ ಮೋಡಿ ಮಾಡಿದರು. ಜಾನಪದ ಕುಣಿತ ಅಲ್ಲದೆ ಸಾಂಸ್ಕೃತಿಕ ಹಾಡು ಕುಣಿತಗಳು ಪ್ರೇಕ್ಷಕರನ್ನು ರಂಜಿಸಿದವು. ಬೊಂಬೆ ಕುಣಿತ ಇನ್ನಿತರೆ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಕೃತಿ ಮೆರವಣಿಗೆಗೆ ಮೆರಗು ನೀಡಿತು.

ಎದೆ ನಡುಗಿಸುವ ಡಿಜೆ ಸದ್ದು, ಕಣ್ಣು ಕುಕ್ಕುವ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಡಿ ಯುವಕ, ಯುವತಿಯರು ಕುಣಿಯುತ್ತಾ ಸಾಗುತ್ತಿದ್ದರೆ ಕೇಸರಿ ನದಿಯೇ ಹರಿದು ಬರುತ್ತಿರುವಂತೆ ಭಾಸವಾಗುತ್ತಿತ್ತು. ರಾಜಬೀದಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟಗಳ ಹಾರಾಟ ಧ್ವನಿವರ್ಧಕದೊಂದಿಗೆ ಝೇಂಕರಿಸಿತು. 55 ರಿಂದ 60 ಸಾವಿರದ ವರೆಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. 1200ಕ್ಕೂ ಅಧಿಕ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಬಳ್ಳಾರಿಯ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಭಾವಹಿಸಿದ್ದರು.

ಸಿರುಗುಪ್ಪ ನಗರದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗೂ ಹಿಂದೂ ಮಹಾ ಗಣಪತಿ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿ ವಿಸರ್ಜನೆಯ ಅಂಗವಾಗಿ ಬೃಹತ್ ಶೋಭಾಯಾತ್ರೆ ಶನಿವಾರ ಸಡಗರ ಸಂಭ್ರಮದಿಂದ ನಡೆಯಿತು.
ಸಿರುಗುಪ್ಪ ನಗರದಲ್ಲಿ ಶನಿವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ನಾಗವೇಷಧಾರಿಗಳ ಕುಣಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.