ADVERTISEMENT

ದಿನವಿಡೀ ವ್ಯಾಪಾರ ವಹಿವಾಟು ಸ್ಥಗಿತ, ಹೊಸಪೇಟೆ ಬಂದ್‌ ಸಂಪೂರ್ಣ ಯಶಸ್ವಿ

ರೈತ, ಕಾರ್ಮಿಕರ ಹೋರಾಟಕ್ಕೆ ಸಾರ್ವಜನಿಕರಿಂದ ಬೆಂಬಲ;

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 11:09 IST
Last Updated 28 ಸೆಪ್ಟೆಂಬರ್ 2020, 11:09 IST
‘ರೈತ ಕಾರ್ಮಿಕರ ದಲಿತರ ಐಕ್ಯ ಹೋರಾಟ ಸಮಿತಿ’ಯ ನೂರಾರು ಕಾರ್ಯಕರ್ತರು ಹೊಸಪೇಟೆಯಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು
‘ರೈತ ಕಾರ್ಮಿಕರ ದಲಿತರ ಐಕ್ಯ ಹೋರಾಟ ಸಮಿತಿ’ಯ ನೂರಾರು ಕಾರ್ಯಕರ್ತರು ಹೊಸಪೇಟೆಯಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಹೊಸಪೇಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಭೂಸ್ವಾಧೀನ, ಭೂಸುಧಾರಣೆ, ಎಪಿಎಂಸಿ, ವಿದ್ಯುತ್‌ ಶಕ್ತಿ ಹಾಗೂ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ‘ರೈತ ಕಾರ್ಮಿಕರ ದಲಿತರ ಐಕ್ಯ ಹೋರಾಟ ಸಮಿತಿ’ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹೊಸಪೇಟೆಯಲ್ಲಿ ಸೋಮವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಿರೀಕ್ಷೆಗೂ ಮೀರಿ ಯಶ ಕಂಡಿತು.

ನಗರದ 22 ಸಂಘಟನೆಗಳನ್ನು ಒಳಗೊಂಡ ಐಕ್ಯ ಹೋರಾಟ ಸಮಿತಿಯ ಬಂದ್‌ಗೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಬೆಂಬಲಿಸಿದ್ದರಿಂದ ಬಂದ್‌ ಸಂಪೂರ್ಣ ಯಶಸ್ವಿಗೊಂಡಿತು. ಅಷ್ಟೇ ಅಲ್ಲ, ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ನಡೆಸಿ, ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ರಾತ್ರಿ ಬಾಗಿಲು ಮುಚ್ಚಿದ್ದ ನಗರದ ಬಹುತೇಕ ಮಳಿಗೆಗಳು ಸೋಮವಾರ ಕೂಡ ಬಾಗಿಲು ತೆರೆದಿರಲಿಲ್ಲ. ಅಲ್ಲಲ್ಲಿ ಕೆಲವು ಹೋಟೆಲ್‌, ಮಳಿಗೆಗಳು ತೆರೆದಿದ್ದವು. ಆದರೆ, ಪ್ರತಿಭಟನಾಕಾರರು ಬಂದು ಅವುಗಳನ್ನು ಮುಚ್ಚಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಬೆಳಿಗ್ಗೆ ಒಂಬತ್ತು ಗಂಟೆಯವರೆಗೆ ನಿರ್ಭಿಡೆಯಿಂದ ಸಂಚರಿಸಿದವು. ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ ನಂತರವಷ್ಟೇ ಸಂಚಾರ ಸ್ಥಗಿತಗೊಂಡಿತು. ಪರ ಊರುಗಳಿಗೆ ಹೋಗುವವರು ನಿಲ್ದಾಣದಲ್ಲೇ ಕಾದು ಕುಳಿತಿದ್ದರು. ಆಟೊ, ಮ್ಯಾಕ್ಸಿಕ್ಯಾಬ್‌, ಟಂಟಂ ಸೇರಿದಂತೆ ಯಾವುದೇ ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ.

ADVERTISEMENT

ಬೆಳಿಗ್ಗೆ ದಿನಪತ್ರಿಕೆ, ಹಾಲು ಎಂದಿನಂತೆ ಪೂರೈಕೆಯಾಯಿತು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಆಸ್ಪತ್ರೆಗಳು, ಮೆಡಿಕಲ್‌, ಆಂಬುಲೆನ್ಸ್‌ ಸೇರಿದಂತೆ ಇತರೆ ತುರ್ತು ಸೇವೆಗಳು ಎಂದಿನಂತೆ ಇದ್ದವು. ಮಾರುಕಟ್ಟೆ ಬಂದ್‌ ಇತ್ತು. ಜನ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದಕ್ಕೆ ಸಾರಿಗೆ ವ್ಯವಸ್ಥೆ ಇರದ ಕಾರಣ ಹೊರಬರಲಿಲ್ಲ. ಹಾಗಾಗಿ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ನಗರದ ಪ್ರಮುಖ ವೃತ್ತ, ಮಾರ್ಗಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಸೇರಿದ ಸಮಿತಿಯ ನೂರಾರು ಕಾರ್ಯಕರ್ತರು ವಾಲ್ಮೀಕಿ ವೃತ್ತ, ರಾಮ ಟಾಕೀಸ್‌, ಉದ್ಯೋಗ ಪೆಟ್ರೋಲ್‌ ಬಂಕ್‌, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್‌ ನಿಲ್ದಾಣದ ಮೂಲಕ ಹಾದು ರೋಟರಿ ವೃತ್ತದಲ್ಲಿ ಸಮಾವೇಶಗೊಂಡರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಅವರ ವಿರುದ್ಧ ಘೋಷಣೆ ಕೂಗಿದರು. ಅಲ್ಲಿ ಸಂಜೆವರೆಗೆ ಧರಣಿ ನಡೆಸಿದರು.

ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವ್ಯವಸ್ಥಿತವಾಗಿ ರೈತರನ್ನು ಒಕ್ಕಲುತನದಿಂದ ಹೊರದಬ್ಬುವ ಹುನ್ನಾರ ನಡೆಸುತ್ತಿವೆ. ಕೊರೊನಾದಿಂದ ಜನ ಭಯಭೀತರಾಗಿ ಮನೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಗ್ರೀವಾಜ್ಞೆ ಮೂಲಕ ಭೂಸುಧಾರಣೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ತುರ್ತಾದರೂ ಏನಿತ್ತು?’ ಎಂದು ಪ್ರಶ್ನಿಸಿದರು.

‘ಯಾವುದೇ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮುನ್ನ ವಿಧಾನಸಭೆ, ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ಆಗಬೇಕು. ರೈತರೊಂದಿಗೆ ಸಮಾಲೋಚಿಸಬೇಕು. ಅದು ಬಿಟ್ಟು ಏಕಾಏಕಿ ಈ ಕಾನೂನುಗಳನ್ನು ತರುವುದರ ಮೂಲಕ ರೈತರಿಗೆ ಮರಣ ಶಾಸನ ಬರೆದಿದ್ದಾರೆ. ಇದು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರ ವ್ಯವಸ್ಥೆಯೋ ಗೊತ್ತಾಗುತ್ತಿಲ್ಲ. ಇದು ಮೋದಿ ಸರ್ಕಾರದ ದುರಾಡಳಿತದ ಅಂತ್ಯಕಾಲ’ ಎಂದು ಟೀಕಿಸಿದರು.

‘ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರು ಭೂಸುಧಾರಣೆ ಕಾಯ್ದೆ ಜಾರಿಗೆ ತಂದಿದ್ದರು. ದೇವರಾಜು ಅರಸು ಅವರು ಅದನ್ನು ಮತ್ತಷ್ಟು ಬಲಪಡಿಸಿದರು. ಆದರೆ, ಆ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್‌ನವರಿಗೆ ಮೋದಿ ಅನುಕೂಲ ಮಾಡಿಕೊಡುತ್ತಿದ್ದಾರೆ. ರೈತರ ಸಾಲ ಮನ್ನಾದ ಬಗ್ಗೆ ಚಕಾರ ಎತ್ತದ ಮೋದಿ ಬಂಡವಾಳಷಾಹಿಗಳ ಸಾಲ ರಾತ್ರೋರಾತ್ರಿ ಮನ್ನಾ ಮಾಡಿದ್ದಾರೆ. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಭವಿಷ್ಯದ ದಿನಗಳಲ್ಲಿ ರೈತರ ಒಪ್ಪಿಗೆಯಿಲ್ಲದೆ ಅವರ ಜಮೀನು ವಶಪಡಿಸಿಕೊಳ್ಳಬಹುದು’ ಎಂದರು.

‘ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸಿದ್ದಾರೆ. ವಿದ್ಯುತ್‌ ಕಾಯ್ದೆ ತಿದ್ದುಪಡಿಯಿಂದ ಭವಿಷ್ಯದಲ್ಲಿ ಯಾರಿಗೂ ರಿಯಾಯಿತಿ ದರ ಹಾಗೂ ಉಚಿತವಾಗಿ ವಿದ್ಯುತ್‌ ಸಿಗುವುದಿಲ್ಲ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಯಾರು, ಎಷ್ಟು ಬೇಕಾದರೂ ದವಸ ಧಾನ್ಯಗಳನ್ನು ದಾಸ್ತಾನು ಮಾಡಬಹುದು. ಇದರಿಂದ ಕೃತಕವಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುವ ಆತಂಕವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ಜೆಡಿಎಸ್‌ ಮುಖಂಡ ಕೊಟ್ರೇಶ್‌, ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ರೆಡ್ಡಿ, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ರಾಮನಗೌಡ, ತಾಯಪ್ಪ ನಾಯಕ, ನಾಗರತ್ನಮ್ಮ, ಆಜಾದ್‌, ಖಾಜಾ ಇಮಾಮ್‌ ನಿಯಾಜಿ, ಕಲ್ಯಾಣಯ್ಯ, ಸಣ್ಣ ಮಾರೆಪ್ಪ, ಯಲ್ಲಾಲಿಂಗ, ಸೋಮಶೇಖರ್‌ ಬಣ್ಣದಮನೆ, ನಿಂಬಗಲ್‌ ರಾಮಕೃಷ್ಣ, ಸಿ.ಆರ್‌. ಭರತ್‌ ಕುಮಾರ್‌, ಎಚ್‌.ಎಲ್‌. ಸಂತೋಷ್‌, ಘಂಟೆ ಸೋಮಶೇಖರ್‌, ಡಿ. ವೆಂಕಟರಮಣ, ಬಿಸಾಟಿ ಮಹೇಶ್‌, ಪ್ರಶಾಂತ್‌ ಬಡಿಗೇರ್‌, ಶಶಿಧರ್‌ ಸೇರಿದಂತೆ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.