ಬಳ್ಳಾರಿ: ಸಂಡೂರು ಮತ್ತು ಬಳ್ಳಾರಿ ತಾಲೂಕು ಸೇರಿದಂತೆ ರಾಜ್ಯದ ಗಣಿ ಬಾಧಿತ ಪ್ರದೇಶಗಳ 10 ತಾಲೂಕುಗಳಲ್ಲಿನ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಮುಂದಾಗಿರುವ ರಾಜ್ಯ ಸರ್ಕಾರ, ಕೆಎಂಇಆರ್‌ಸಿ ಅನುದಾನದಲ್ಲಿ 14 ವರ್ಷ ವಯಸ್ಸಿನ 17,964 ಹೆಣ್ಣುಮಕ್ಕಳಿಗೆ ಎಚ್‌ಪಿವಿ (ಮನ್ ಪ್ಯಾಪಿಲೋಮವೈರಸ್) ಲಸಿಕೆ ಹಾಕಲು ನಿರ್ಧರಿಸಿದೆ.
2025–26ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಈ ವಿಷಯವನ್ನು ಪ್ರಸ್ತಾಪಿಸಿತ್ತು. ‘ಮಹಿಳೆಯರಲ್ಲಿ ಗಣಿಗಾರಿಕೆ ಪೀಡಿತ ಪ್ರದೇಶಗಳು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲ್ಲೂಕುಗಳಲ್ಲಿ ಮೊದಲ ಹಂತದಲ್ಲಿ ಎಚ್‌ಪಿವಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ರೂಪಿಸಲಾಗುವುದು, ಇದಕ್ಕಾಗಿ ₹9 ಕೋಟಿ ಖರ್ಚು ಮಾಡಲಾಗುವುದು’ ಎಂದು ತಿಳಿಸಿತ್ತು.
ಇದರ ಭಾಗವಾಗಿ ಮೊದಲ ಹಂತದಲ್ಲಿ ಗಣಿಬಾಧಿತ ಪ್ರದೇಶಗಳಲ್ಲಿ ಕಾರ್ಯಕ್ರಮ ಜಾರಿಯಾಗುತ್ತಿದೆ. ₹4.54 ಕೋಟಿ ಅನುದಾನ ಬಿಡುಗಡೆ ಮಾಡಲು ‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)’ವು ಅನುಮೋದನೆ ನೀಡಿದೆ.
ಲಸಿಕೆಯನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ, ಪಿಎಚ್‌ಎಚ್ ಪಡಿತರ ಚೀಟಿ ಹೊಂದಿರುವ, ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಶಾಲೆಬಿಟ್ಟ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡಬೇಕು. 2 ಡೋಸ್‌ಗಳನ್ನು ನಿಗದಿತ ಅವಧಿಯೊಳಗೆ ನೀಡಬೇಕು. ಅಗತ್ಯವಿರುವ ಚುಚ್ಚುಮದ್ದುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಚುಚ್ಚುಮದ್ದು ವಿಭಾಗದಿಂದ ಹಾಕಿಸಬೇಕು. ಚುಚ್ಚು ಮದ್ದು ನೀಡುವಾಗ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದೂ ಸರ್ಕಾರ ತಿಳಿಸಿದೆ.
ಆರಂಭದಲ್ಲಿ ಗಣಿಬಾಧಿತ ಪ್ರದೇಶಗಳ 8 ತಾಲೂಕುಗಳಲ್ಲಿ ಕಾರ್ಯಕ್ರಮ ಜಾರಿಗೆ ಅನುದಾನ ನೀಡುವುದಾಗಿ ಕೆಎಂಇಆರ್‌ಸಿ ಹೇಳಿತ್ತು. ಆದರೆ, ತನ್ನ ನಿರ್ಧಾರ ಪರಿಷ್ಕರಿಸಿರುವ ಕೆಎಂಇಆರ್‌ಸಿ 10 ತಾಲೂಕುಗಳಲ್ಲಿ ಕಾರ್ಯಕ್ರಮ ಜಾರಿಗೆ ಅನುಮೋದನೆ ನೀಡಿದೆ.
ಮಹಿಳೆಯರ ರಕ್ಷಣಾ ಕ್ರಮ: ಈ ಕುರಿತು ಇತ್ತೀಚೆಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಪ್ರತಿ 8 ನಿಮಿಷಗಳಿಗೊಮ್ಮೆ, ಭಾರತದಲ್ಲಿ ಒಬ್ಬ ಮಹಿಳೆ ಗರ್ಭಕಂಠ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ. ಪ್ರಾಥಮಿಕ ಕಾರಣವಾದ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಅನ್ನು ಲಸಿಕೆ ಮೂಲಕ ಪರಿಣಾಮಕಾರಿಯಾಗಿ ತಡೆಯಬಹುದು. ಕೆಎಂಇಆರ್‌ಸಿ ಅನುಮೋದನೆ ನೀಡಿರುವ ಈ ಕಾರ್ಯಕ್ರಮವು ಮಹಿಳೆಯರ ಆರೋಗ್ಯ ರಕ್ಷಣೆಗೆ ನೆರವಾಗಲಿದೆ’ ಎಂದಿದ್ದಾರೆ.
ಮಹಿಳೆಯರನ್ನು ಗರ್ಭಕಂಠ ಕ್ಯಾನ್ಸರ್‌ನಿಂದ ಪಾರು ಮಾಡಲು ಇದು ಅತ್ಯುತ್ತಮ ಕಾರ್ಯಕ್ರಮ. ಸರ್ಕಾರ ಇನ್ನೂ ಮಾರ್ಗಸೂಚಿಗಳನ್ನು ನೀಡಿಲ್ಲ. ಸೂಚನೆ ಬಂದ ಕೂಡಲೇ ಜಾರಿಯಾಗಲಿದೆ.ಡಾ. ಯಲ್ಲಾ ರಮೇಶ್‌ಬಾಬು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಏನಿದು ಗರ್ಭಕಂಠ ಕ್ಯಾನ್ಸರ್ ಲಸಿಕೆ ಉಪಯುಕ್ತವೇ?
ಇದು ಒಂದು ಬಗೆಯ ಕ್ಯಾನ್ಸರ್. ಯೋನಿಗೆ ಸಂಪರ್ಕಿಸುವ ಗರ್ಭಾಶಯದ ಕೆಳಭಾಗದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ‘ಹ್ಯೂಮನ್ ಪ್ಯಾಪಿಲೋಮವೈರಸ್(ಎಚ್‌ಪಿವಿ)’ ವೈರಾಣುವಿನ ಸೋಂಕಿನಿಂದ ಈ ಸಮಸ್ಯೆ ಬರುತ್ತದೆ. ಎಚ್‌ಪಿವಿ ಲಸಿಕೆ ಎಂಬುದು ಮುಂಜಾಗ್ರತಾ ಕ್ರಮ. ಸೋಂಕಿನಿಂದ ಇದು ರಕ್ಷಣೆ ನೀಡುತ್ತದೆ.
ಎಲ್ಲೆಲ್ಲಿ ಕಾರ್ಯಕ್ರಮ ಜಾರಿ
ಬಳ್ಳಾರಿ ಜಿಲ್ಲೆ: ಬಳ್ಳಾರಿ ಮತ್ತು ಸಂಡೂರು (ಮೀಸಲಿಟ್ಟ ಅನುದಾನ: ₹1.86 ಕೋಟಿ) ವಿಜಯನಗರ: ಹೊಸಪೇಟೆ (₹56 ಲಕ್ಷ) ಚಿತ್ರದುರ್ಗ: ಚಿತ್ರದುರ್ಗ ಹೊಳಲ್ಕೆರೆ ಹೊಸದುರ್ಗ ಮೊಳಕಾಲ್ಮೂರು (₹1.36 ಕೋಟಿ) ತುಮಕೂರು: ಗುಬ್ಬಿ ಚಿಕ್ಕನಾಯಕನಹಳ್ಳಿ ತಿಪಟೂರು (₹76 ಲಕ್ಷ)ಗಳಲ್ಲಿ ಲಸಿಕೆ ಹಾಕಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.