ಹೂವಿನಹಡಗಲಿ: ಮಲೆನಾಡಿನಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ಒಳ ಹರಿವು ಮತ್ತಷ್ಟು ಹೆಚ್ಚಳವಾಗಿದೆ. ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.
ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನವನ್ನು ಭಾನುವಾರ ನದಿ ಸುತ್ತುವರಿದಿದೆ. ದೇವಸ್ಥಾನ ಸಮಿತಿಯವರು ಮುಂಜಾಗ್ರತಾ ಕ್ರಮವಾಗಿ ದೇಗುಲ ಮುಂಭಾಗದ ನದಿಗೆ ಅಡ್ಡಲಾಗಿ ಹಗ್ಗ ಕಟ್ಟಿದ್ದಾರೆ. ನದಿಗೆ ಯಾರೂ ಇಳಿಯದಂತೆ ಅರಿವು ಮೂಡಿಸುತ್ತಿದ್ದಾರೆ.
ತಾಲ್ಲೂಕಿನ ಹಿರೇಬನ್ನಿಮಟ್ಟಿ, ಮಕರಬ್ಬಿ, ಬ್ಯಾಲಹುಣ್ಸಿ, ನಂದಿಗಾವಿ ಗ್ರಾಮಗಳ ನದಿ ತೀರದ ಕೃಷಿ ಜಮೀನುಗಳು ಮುಳುಗಡೆಯಾಗಿವೆ. ನೂರಾರು ಎಕರೆ ಭತ್ತ, ಅಡಿಕೆ, ಮೆಕ್ಕೆಜೋಳ ಬೆಳಗಳು ಜಲಾವೃತಗೊಂಡಿದ್ದು, ರೈತರು ಬೆಳೆಹಾನಿಯ ಆತಂಕಕ್ಕೆ ಒಳಗಾಗಿದ್ದಾರೆ. ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾದಲ್ಲಿ ಮಕರಬ್ಬಿ-ಬ್ಯಾಲಹುಣ್ಸಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ನದಿಗೆ ಅಳವಡಿಸಿರುವ ಮೋಟಾರ್ ಪಂಪ್ ಸೆಟ್ ಗಳನ್ನು ತೆರವುಗೊಳಿಸಿ, ಹೊರಗೆ ತರಲು ರೈತರು ಪರದಾಡುತ್ತಿದ್ದಾರೆ.
ಸಮೀಪದ ಸಿಂಗಟಾಲೂರು ಬ್ಯಾರೇಜ್ ನಲ್ಲಿ ಭಾನುವಾರ 1,68,488 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಬ್ಯಾರೇಜ್ ನ 17 ಗೇಟ್ ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ತಡೆಗೋಡೆ ದಾಟಿಕೊಂಡು ನದಿಯ ನೀರು ಭೋರ್ಗರೆಯುವ ದೃಶ್ಯ ರುದ್ರ ರಮಣೀಯವಾಗಿದೆ. ಇದನ್ನು ವೀಕ್ಷಿಸಲು ಅಪಾರ ಜನರು ಬ್ಯಾರೇಜ್ ಗೆ ಆಗಮಿಸುತ್ತಿದ್ದಾರೆ.
‘ನದಿ ತೀರದ ಕಣ್ಗಾವಲಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅವಶ್ಯಕತೆ ಇರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲು ವಸತಿಶಾಲೆ, ಹಾಸ್ಟೆಲ್ ಗಳನ್ನು ಗುರುತಿಸಿದ್ದೇವೆ’ ಎಂದು ಪ್ರಭಾರ ತಹಶೀಲ್ದಾರ್ ಅಮರೇಶ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.