ADVERTISEMENT

ಮಕ್ಕಳ ಪ್ರಶ್ನೆಗೆ ಉತ್ತರ ಕೊಡಲಾಗುತ್ತಿಲ್ಲ: ಮಂಗಲಾ

​ಪ್ರಜಾವಾಣಿ ವಾರ್ತೆ
Published 7 ಮೇ 2021, 7:45 IST
Last Updated 7 ಮೇ 2021, 7:45 IST
ಮಂಗಲಾ
ಮಂಗಲಾ   

ಹೂವಿನಹಡಗಲಿ: ‘ಅಮ್ಮಾ ನೀನು ಕೋವಿಡ್ ಡ್ಯೂಟಿಗೆ ಹೋದ್ರೆ ವಾರ ಕಾಲ ನಮ್ಮಿಂದ ದೂರ ಇರ್ತಿಯಾ. ಬಂದ ಮೇಲೂ ನಮ್ಮನ್ನ ಹತ್ರ ಸೇರ್ಸಲ್ಲ. ನಮ್ಮಿಂದ ದೂರ ಇರೋದಾದ್ರೆ ನೀ ಡ್ಯೂಟಿಗೆ ಹೋಗೋದೆ ಬೇಡಮ್ಮ’. ಮನೆಯಲ್ಲಿ ಮಕ್ಕಳು ಈ ರೀತಿ ಹಟ ಮಾಡುವಾಗ ಕರುಳು ಚುರುಕ್ ಎನ್ನುತ್ತೆ.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಶುಶ್ರೂಷಕಿ ಬಿ. ಮಂಗಳಾ ಅವರ ಮಾತು.

ಕೋವಿಡ್ ವಾರ್ಡ್, ಹೆರಿಗೆ ವಾರ್ಡ್ ಹಾಗೂ ಸಾಮಾನ್ಯ ವಾರ್ಡಿನಲ್ಲಿ ಇವರು ಸರದಿ ಪ್ರಕಾರ ಕಾರ್ಯ ನಿರ್ವಹಿಸುತ್ತಾರೆ. ವೃತ್ತಿಪರತೆ, ಆತ್ಮಿಯವಾಗಿ ಬೆರೆಯುವ ಗುಣದಿಂದಾಗಿ ಇವರು ರೋಗಿಗಳ ಅಚ್ಚುಮೆಚ್ಚಿನ ಶುಶ್ರೂಷಕಿಯಾಗಿದ್ದಾರೆ.

ADVERTISEMENT

‘ಕೋವಿಡ್ ವಾರ್ಡ್ ಕರ್ತವ್ಯ ಬಳಿಕ ವಾರ ಕಾಲ ಪ್ರತ್ಯೇಕ ವಾಸದಲ್ಲಿರುತ್ತೇವೆ. ಆಗ ಮಕ್ಕಳು ಬಿಟ್ಟಿರಲಾಗದೇ ಅಳುತ್ತಾರೆ. ನಮಗೂ ದುಃಖವಾಗುತ್ತದೆ. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಯಾಗಿರುವ ಪತಿ ಮಂಜುನಾಥ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಕುಟುಂಬ, ಮಕ್ಕಳು ಎಷ್ಟು ಮುಖ್ಯವೋ ರೋಗಿಗಳ ಆರೈಕೆಯೂ ನಮಗೆ ಅಷ್ಟೇ ಮುಖ್ಯ’ ಎಂದು ಹೇಳಿದರು.

‘ಅಮ್ಮಾ ಕೊರೊನಾ ಬಂದು ಜನ ಸಾಯ್ತಾ ಇದಾರೆ. ಆ ರೋಗ ಬಂದವರ್ನ ಅವರ ಮನೆಯವರೇ ಮುಟ್ಟೋದಿಲ್ವಂತೆ. ಮತ್ತೆ ನೀವು ಅವ್ರಿಗೆಲ್ಲ ಟ್ರೀಟ್ ಮಾಡ್ತೀರಲ್ಲ ನಿಮಗೆ ಏನೂ ಆಗಲ್ವೆ?’ ಎಂದು 3ನೇ ತರಗತಿ ಓದುವ ಮಗ ಗೌತಮ, 1ನೇ ತರಗತಿಯ ಮಗಳು ಲತಿಕಾ ಪ್ರಿಯ ಕೇಳುವ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಕೊಡ್ಲಿಕ್ಕೆ ಆಗುತ್ತಿಲ್ಲ …. ಎಂದು ಮಂಗಳಾ ಹೇಳಿದರು.

‘ಹಿಂದಿನ ವರ್ಷ ಬೆರಳೆಣಿಕೆಯ ಸೋಂಕಿತರು ಕೋವಿಡ್ ವಾರ್ಡಿಗೆ ದಾಖಲಾಗುತ್ತಿದ್ದರು. ಈ ಬಾರಿ ಹೆಚ್ಚಿನವರು ಬರುತ್ತಿದ್ದಾರೆ. ಸೋಂಕಿಗೆ ಹೆದರಿ ಕುಟುಂಬದವರೂ ಹತ್ತಿರ ಸುಳಿಯುತ್ತಿರಲಿಲ್ಲ. ನೀವು ಆರೈಕೆ ಮಾಡಿ, ಪುನರ್ಜನ್ಮ ನೀಡಿದ್ದೀರಿ ಎಂದು ಕೆಲವರು ಡಿಸ್ಚಾರ್ಜ್ ಆಗುವಾಗ ಕೈ ಮುಗಿಯುತ್ತಲೇ ಕಣ್ಣೀರು ಹಾಕುತ್ತಾರೆ. ಈ ಪ್ರಶಂಸೆಯ ಮಾತು ಸಾರ್ಥಕ ಭಾವ ಮೂಡಿಸುತ್ತದೆ’ ಎಂದರು.

2008ರಲ್ಲಿ ಶುಶ್ರೂಷಕಿಯಾಗಿ ನೇಮಕಗೊಂಡಿರುವ ಮಂಗಳಾ ಆರು ವರ್ಷಗಳಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ‘ಡಿ’ ಗ್ರೂಪ್ ಸಿಬ್ಬಂದಿಯಾಗಿ ನಿವೃತ್ತಿ ಹೊಂದಿರುವ ತಂದೆ ಚಂದ್ರಪ್ಪ ಇವರಿಗೆ ಪ್ರೇರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.