ADVERTISEMENT

ನೇಕಾರ ಮಕ್ಕಳಿಗೆ ಐ.ಎ.ಎಸ್‌. ತರಬೇತಿ: ಎಂ.ಡಿ. ಲಕ್ಷ್ಮಿನಾರಾಯಣ

ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 11:17 IST
Last Updated 26 ಜನವರಿ 2019, 11:17 IST
ಕಾರ್ಯಕ್ರಮದಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಮಾತನಾಡಿದರು–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ನೇಕಾರ ಸಮಾಜದ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಐ.ಎ.ಎಸ್‌, ಐ.ಎಫ್‌.ಎಸ್‌., ಐ.ಪಿ.ಎಸ್‌. ಸೇರಿದಂತೆ ಇತರೆ ಹುದ್ದೆಗೆ ಹೋಗಲು ಅಗತ್ಯ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ’ ಎಂದುರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ತಿಳಿಸಿದರು.

ಶನಿವಾರ ಇಲ್ಲಿ ತಾಲ್ಲೂಕು ನೇಕಾರರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ‘ವೃತ್ತಿಪರ ಕೋರ್ಸ್‌ ಮಾಡುವವರಿಗೂ ಎಲ್ಲ ರೀತಿಯ ನೆರವು ನೀಡಲಾಗುವುದು. ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳನ್ನು ಗುರುತಿಸಿ ದತ್ತು ಪಡೆಯಲಾಗುವುದು’ ಎಂದು ವಿವರಿಸಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಜನಾಂಗ ಬಹಳ ಹಿಂದುಳಿದಿದೆ. ಅದರಲ್ಲಿ ಗಟ್ಟಿಯಾಗಿ ಬೆಳೆದರೆ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬಹುದು. ಆಯಾಕಟ್ಟಿನ ಸ್ಥಳಗಳಲ್ಲಿ ಸಮಾಜದವರು ಇದ್ದರೆ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬಹುದು’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಐ.ಎ.ಎಸ್‌., ಐ.ಪಿ.ಎಸ್‌. ಹಾಗೂ ಇತರೆ ಕೇಡರ್‌ ಅಧಿಕಾರಿಗಳಿದ್ದಾರೆ. ವಾಸ್ತವದಲ್ಲಿ ಇವರೇ ಸರ್ಕಾರ ನಡೆಸುವವರು. ರಾಜಕಾರಣಿಗಳು ಅವರು ತಂದುಕೊಡುವ ಕಡತಗಳಿಗೆ ಸಹಿಯಷ್ಟೇ ಮಾಡುತ್ತಾರೆ. ಬೆರಳೆಣಿಕೆಯಷ್ಟು ಜನ ಎಲ್ಲ ಕಡತಗಳನ್ನು ಪರಿಶೀಲಿಸುತ್ತಾರೆ. ಅಂತಹ ಸ್ಥಾನಗಳನ್ನು ಸಮಾಜದವರು ಅಲಂಕರಿಸಬೇಕೆಂಬ ಕನಸಿನೊಂದಿಗೆ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ನೇಕಾರಿಕೆ ಬಹುತೇಕ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಶೇ 0.8ಕ್ಕಿಂತ ಕಡಿಮೆ ಜನ ನೇಕಾರಿಕೆ ಮಾಡುತ್ತಾರೆ. ವೃತ್ತಿ ಅಧೋಗತಿಗೆ ಬಂದಿದೆ. ರಾಜ್ಯದಲ್ಲಿ 1,461 ಜಾತಿಗಳಿವೆ. ಈ ಪೈಕಿ ನೇಕಾರರು ಸೇರಿದಂತೆ 102 ಜಾತಿಗಳು ’2ಎ’ನಲ್ಲಿ ಇವೆ. ನೇಕಾರರಲ್ಲಿರುವ ಎಲ್ಲ 29 ಒಳಪಂಗಡಗಳು ಒಂದಾಗಿ ಧ್ವನಿ ಎತ್ತಿದರೆ ವಿಶೇಷ ಸ್ಥಾನಮಾನ ಪಡೆಯಬಹುದು’ ಎಂದು ಹೇಳಿದರು.

ಹಂಪಿ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ಮಾತನಾಡಿ, ‘ನೇಕಾರರು ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಎಲ್ಲರೂ ಒಂದೇ ವೇದಿಕೆಗೆ ಬಂದರೆ ಅಧಿಕಾರ ಸ್ಥಾನದಲ್ಲಿರುವವರು ನಮ್ಮ ಕೂಗು ಕೇಳಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸಂಘ ಸ್ಥಾಪಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಮ್ಮಿನಕಟ್ಟಿ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ, ಬೆಟಗೇರಿ ಕುರುಹಿನಶೆಟ್ಟಿ ಸಮಾಜದ ನೀಲಕಂಠ ಪಟ್ಟದಾರಿ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ದೊಡ್ಡಬಳ್ಳಾಪುರ ಪುಷ್ಪಾಂಜಲಿ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ಗುಳೇದಗುಡ್ಡ ಪಟ್ಟಸಾಲಿ ಗುರುಪೀಠದ ಬಸವರಾಜ ಪಟ್ಟದಾರ್ಯಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಘದ ಜಿಲ್ಲಾ ಅಧ್ಯಕ್ಷ ದೇವಾನಂದ, ತಾಲ್ಲೂಕು ಅಧ್ಯಕ್ಷ ಬಸವರಾಜ ನಾಲತ್ವಾಡ ಗೌರವ ಅಧ್ಯಕ್ಷ ಬೋಡಾ ರಾಮಪ್ಪ, ಉಪಾಧ್ಯಕ್ಷ ಅಗಳಿ ಭಾಸ್ಕರ್‌, ಸಹ ಕಾರ್ಯದರ್ಶಿ ಪರಗಿ ಶ್ರೀಶೈಲಪ್ಪ, ಸಂಘಟನಾ ಕಾರ್ಯದರ್ಶಿ ಬುದ್ಧಿ ರಾಮಕೃಷ್ಣ, ನಿರ್ದೇಶಕ ಗೋಪಾಲ್ ರಾವ್‌ ಕೆಂದೋಳಿ, ಸಲಹಾ ಸಮಿತಿ ಸದಸ್ಯರಾದ ಐಲಿ ಸಿದ್ದಣ್ಣ, ತೋಟಾ ಆಂಜನೇಯಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.