ಬಳ್ಳಾರಿ: ‘ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್’ ಸಂಡೂರಿನಲ್ಲಿರುವ ತನ್ನ ‘ಕಿರ್ಲೋಸ್ಕರ್ ಭಾರತ್ ಮೈನ್ಸ್ (ಎಂ.ಎಲ್ 0016)’ ನಿಂದ ಅದಿರನ್ನು ಅಕ್ರಮ ಮಾರ್ಗದಲ್ಲಿ ಸಾಗಿಸುತ್ತಿದ್ದು, ಕಂಪನಿಯ ವಿರುದ್ದ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಜನಸಂಗ್ರಾಮ ಪರಿಷತ್ ಆಗ್ರಹಿಸಿದೆ.
ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಸೆ.15ರಂದು ಸಂಘಟನೆ ಪತ್ರ ಬರೆದಿದೆ.
‘ಕಿರ್ಲೋಸ್ಕರ್ ಗಣಿಯಿಂದ ಅದಿರು ಸಾಗಾಣಿಕೆ ಮಾಡಲು ಅರಣ್ಯ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆ ಇನ್ನು ಪರಿಶೀಲನೆ ಹಂತದಲ್ಲಿದೆ. ಆದರೆ ಈ ಕಂಪನಿಯು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಕ್ರಮ ಮಾರ್ಗದಲ್ಲಿ ಅದಿರು ಸಾಗಾಣಿಕೆ ಮಾಡುತ್ತಿದೆ. ಅದಿರು ಸಾಗಣೆಗೆ ಈಗ ಬಳಸಲಾಗುತ್ತಿರುವ ರಸ್ತೆಯು ಅರಣ್ಯ/ಕಂದಾಯ ಪ್ರದೇಶದಲ್ಲಿದ್ದು,ಇಲಾಖೆಗಳಿಂದ ಅನುಮತಿ ಪಡೆದಿಲ್ಲ. ಸರ್ವೆ ಸೆಟಲ್‌ಮೆಂಟ್‌ಗಳ ಬಳಿಕ ರಸ್ತೆಯ 225 ಎಕರೆ ಜಮೀನು ಸರ್ಕಾರಿ ಗುಡ್ಡ ಎಂದು ನಮೂದಾಗಿದೆ. ಹೀಗೆ ಸರ್ಕಾರಿ ಗುಡ್ಡದಲ್ಲಿ ಅದಿರು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರದಿಂದಲೂ ಅನುಮತಿ ಪಡೆದಿಲ್ಲ. ರೈತರು–ಆರ್‌ಐಪಿಎಲ್ ನಡುವಿನ ಪ್ರಕರಣದಲ್ಲಿ ವಿವಾದಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯದ ಆದೇಶವಿದೆ. ಆದರೂ ಆರ್‌ಐಪಿಎಲ್ ಈ ಪ್ರದೇಶದ ಮೂಲಕ ಅದಿರನ್ನು ಸಾಗಾಣಿಕೆ ಮಾಡಲು ಕಿರ್ಲೋಸ್ಕರ್‌ಗೆ ಮೌಖಿಕ ಒಪ್ಪಂದದ ಮೂಲಕ ಅವಕಾಶ ಮಾಡಿಕೊಟ್ಟಿದೆ’ ಎಂದು ಸಂಘಟನೆ ಆರೋಪಿಸಿದೆ.
‘ಕಿರ್ಲೋಸ್ಕರ್ ಗಣಿಯಿಂದ ಅದಿರು ಸಾಗಾಣಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡುವ ಪರ್ಮಿಟ್‌ನಲ್ಲಿ ‘ಬಳ್ಳಾರಿ-ಸಂಡೂರು-ನಂದಿಹಳ್ಳಿ’ ಗ್ರಾಮದ ಮಾರ್ಗದ ಮೂಲಕ ಅದಿರು ಸಾಗಾಣಿಕೆ ಮಾಡುವಂತೆ ನಮೂದಿಸಲಾಗಿದೆ. ಆದರೆ ಈ ಕಂಪನಿಯು ಗಣಿ ಇಲಾಖೆಯ ರೂಟ್ ಪರ್ಮಿಟ್‌ಗೆ ವಿರುದ್ದವಾಗಿ ರಣಜಿತ್‌ಪುರ-ನರಸಿಂಗಾಪುರ ಮಾರ್ಗದ ರಸ್ತೆಯನ್ನು ಬಳಸಿಕೊಂಡು ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡುತ್ತಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಈ ಎಲ್ಲ ಅಂಶಗಳನ್ನು ಪರಿಶೀಲನೆ ಮಾಡಿ ಸರ್ಕಾರದ ಸಕ್ಷಮ ಪ್ರಾಧಿಕಾರ, ಅರಣ್ಯ, ಕಂದಾಯ ಇಲಾಖೆಗಳಿಂದ ಅನುಮತಿಯನ್ನು ಪಡೆಯುವವರೆಗೆ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡುತ್ತಿರುವ ಕಿರ್ಲೋಸ್ಕರ್ ಕಂಪನಿಗೆ ನೀಡಲಾಗುತ್ತಿರುವ ಅದಿರು ಸಾಗಾಣಿಕೆಯ ಪರ್ಮಿಟ್ ಸ್ಥಗಿತಗೊಳಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಆದೇಶಿಸಬೇಕು’ ಎಂದು ಸಂಘಟನೆ ಮನವಿ ಮಾಡಿದೆ.
ಕಿರ್ಲೊಸ್ಕರ್ ಕುರಿತ ಜನಸಂಗ್ರಾಮ ಪರಿಷತ್‌ನ ದೂರು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ದ್ವಿತೀಯಾ ಇ.ಸಿ ಉಪ ನಿರ್ದೇಶಕಿ ಗಣಿ ಮತ್ತು ಭೂವಿಜ್ಞಾನ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.